ವಿದ್ಯುತ್ ಮೀಟರ್‍ಗಳ ಮಾರಾಟ: ಜೆಸ್ಕಾಂ ಮಾರಾಟ ಕಾರ್ಯನಿರ್ವಾಹಕನಿಗೆ ಜೈಲು ಶಿಕ್ಷೆ

ಕಲಬುರಗಿ:ನ.19:ಕಳೆದ 2015ರ ಡಿಸೆಂಬರ್ 15ರಿಂದ 2015ರ ಡಿಸೆಂಬರ್ 21ರ ಅವಧಿಯಲ್ಲಿ ಅನಧಿಕೃತವಾಗಿ ಸುಮಾರು 299364.11ರೂ.ಗಳ ಮೊತ್ತದ 3465 ಮೀಟರ್‍ಗಳನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಸ್ಕಾಂ ಇಲಾಖೆಯ ಪ್ರಸನ್ನ ಟೆಕ್ನಾಲೋಜಿಸ್ಟ್ ಪ್ರೈವೇಟ್ ಲಿಮಿಟೆಡ್‍ನ ಪಂಡಿತ್ ಕರ್ನಾಯಕ್‍ನಿಗೆ ಜೆಎಂಎಫ್‍ಸಿ ನ್ಯಾಯಾಧೀಶ ಸಂತೋಷ್ ಶ್ರೀವಾತ್ಸವ್ ಅವರು ಒಂದು ವರ್ಷ ಶಿಕ್ಷೆ ಹಾಗೂ 5000ರೂ.ಗಳ ದಂಡವನ್ನು ಮತ್ತು ಕಲಂ ಐಪಿಸಿ ಕಲಂ 420 ಅಡಿಯಲ್ಲಿ ಒಂದು ವರ್ಷ ಶಿಕ್ಷೆ ಹಾಗೂ 5000ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಮೀಟರ್‍ಗಳನ್ನು ಮಾರಾಟ ಮಾಡಿದ ಒಟ್ಟು 36,78,928.97ರೂ.ಗಳನ್ನು ಕಂಪೆನಿಗೆ ಕಟ್ಟದೇ ತನ್ನ ಸ್ವಂತಕ್ಕೆ ಬಳಸಿಕೊಂಡು ದುರುಪಯೋಗ ಮಾಡಿಕೊಂಡ ಕುರಿತು ಸಂತೋಷ್ ಶ್ರೀವಾತ್ಸವ್ ವಿರುದ್ಧ ಸ್ಟೇಷನ್ ಬಜಾರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್‍ಐ ಎಸ್.ಎಸ್. ದೊಡ್ಡಮನಿ ಅವರು ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದರು.
ಪ್ರಕರಣದ ಕುರಿತು ವಿಚಾರಣೆ ಕೈಗೊಂಡ ನ್ಯಾಯಾಧೀಶರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ಹಾಗೂ ದಂಡ ವಿಧಿಸಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಶ್ರೀಮತಿ ವೀಣಾರೆಡ್ಡಿ ಅವರು ವಾದವನ್ನು ಮಂಡಿಸಿದರು. ಸದರಿ ಪ್ರಕರಣದಲ್ಲಿ ಪೋಲಿಸ್ ಪೇದೆಗಳಾದ ಮಲ್ಲಿನಾಥ್, ಬ್ರಹ್ಮಾನಂದ್, ಅಕಬರ್ ಅವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು.