ವಿದ್ಯುತ್ ಬಿಲ್ :ಜೆಸ್ಕಾಂ ಸಿಬ್ಬಂದಿಗೆ ತಲೆನೋವು

ಕಲಬುರಗಿ,ಮೇ.17: ಕಾಂಗ್ರೆಸ್ ಸರ್ಕಾರ ಬಂದರೆ 200 ಯುನಿಟ್‍ವರೆಗೆ ವಿದ್ಯುತ್ ಬಿಲ್ ಕಟ್ಟಾಂಗಿಲ್ಲ ಎಂದು ಪಕ್ಷದ ನಾಯಕರು ಐದು ಬಾಂಡ್ ಯೋಜನೆಗಳಲ್ಲಿ ಸೇರ್ಪಡೆ ಮಾಡಿದ್ದು, ಈಗ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದಿದ್ದರಿಂದ ಸರ್ಕಾರ ರಚನೆಯಾಗಲಿದೆ. ಹೀಗಾಗಿ ತಮ್ಮ ತಮ್ಮ ಮನೆಯ ವಿದ್ಯುತ್ ಬಿಲ್‍ಗಳನ್ನು ಪಾವತಿಸಲು ಮನೆಯವರು ನಿರಾಕರಿಸುತ್ತಿದ್ದು, ಇದು ಗುಲಬರ್ಗಾ ವಿದ್ಯುತ್ ಪ್ರಸರಣಾ ನಿಗಮದ ಸಿಬ್ಬಂದಿಗಳಿಗೆ ಹೊಸ ತಲೆನೋವು ತಂದಿದೆ.
ಶಿಕ್ಷಕಿಯೊಬ್ಬರ ಮನೆಗೆ ಹೋದ ಸಿಬ್ಬಂದಿ ವಿದ್ಯುತ್ ಬಿಲ್ ಕಟ್ಟದಿದ್ದರೆ ನಿಮ್ಮ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕುತ್ತಾರೆ. ಆಗ ಶಿಕ್ಷಕಿಯು ನಾವು ಕಟ್ಟಾಂಗಿಲ್ಲ. ಕಾಂಗ್ರೆಸ್ ಸರ್ಕಾರವೇ ಹೇಳಿದೆ. 200 ಯುನಿಟ್‍ವರೆಗೆ ವಿದ್ಯುತ್ ಬಿಲ್ ಕಟ್ಟಬೇಡಿ ಎಂದು. ಆದ್ದರಿಂದ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಬೇಡಿ. ನಾವು ಬಿಲ್ ಕಟ್ಟುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಆಗ ಸಿಬ್ಬಂದಿ ಇನ್ನೂ ನಮಗೆ ಸರ್ಕಾರದಿಂದ ಆದೇಶ ಬಂದಿಲ್ಲ. ಹಾಗಾಗಿ ನಿಮ್ಮ ವಿದ್ಯುತ್ ಬಿಲ್ ಪಾವತಿಸಬೇಕು. ಇಲ್ಲದೇ ಇದ್ದರೆ ನಿಮ್ಮ ವಿದ್ಯುತ್ ಸಂಪರ್ಕ ಕತ್ತರಿಸಲಾಗುವುದು ಎಂದು ಯಾವುದೇ ಮುಲಾಜಿಲ್ಲದೇ ಹೇಳಿದಾಗ, ಅಲ್ಲಿನ ನೆರೆ, ಹೊರೆಯವರೂ ಸಹ ಜೆಸ್ಕಾಂ ಸಿಬ್ಬಂದಿಯನ್ನೇ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರವೇ ವಿದ್ಯುತ್ ಬಿಲ್ ಕಟ್ಟಬೇಡಿ ಎಂದು ಹೇಳಿದೆ. ನೀವು ಸರ್ಕಾರವನ್ನೇ ಕೇಳಿ ಎಂದು ದಬಾಯಿಸಿದ್ದಾರೆ.
ಆದಾಗ್ಯೂ, ಪರಸ್ಪರರ ಮಾತುಗಳು ಮುಂದುವರೆದಾಗ ಇನ್ನು ರಾಜ್ಯದಲ್ಲಿ ಮುಖ್ಯಮಂತ್ರಿಯೇ ಆಗಿಲ್ಲ. ಮುಖ್ಯಮಂತ್ರಿ ಆದ ಮೇಲೆ ಸರ್ಕಾರವೇ ಆದೇಶ ಹೊರಡಿಸುತ್ತದೆ. ಅಲ್ಲಿಯವರೆಗೆ ಕಾಯಿರಿ. ನಾನೂ ಸಹ ಶಿಕ್ಷಕಿ ಇದ್ದೇನೆ. ನನಗೂ ಎಲ್ಲವೂ ಗೊತ್ತಿದೆ. ನೀವು ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸುವ ಅಗತ್ಯವಿಲ್ಲ. ಮೊದಲು ಸರ್ಕಾರ ರಚನೆಯಾದ ಮೇಲೆ ಆದೇಶ ಬಂದೇ ಬರುತ್ತದೆ. ಅಲ್ಲಿಯವರೆಗೆ ಕಾಯಿರಿ ಎಂದು ಹೇಳಿದ್ದಾರೆ. ಆದಾಗ್ಯೂ, ಸಿಬ್ಬಂದಿ ಮಾತ್ರ ವಿದ್ಯುತ್ ಬಿಲ್ ಕಟ್ಟುವ ಕುರಿತು ತನ್ನ ಪಟ್ಟು ಸಡಿಸಲಿಲ್ಲ.