ವಿದ್ಯುತ್ ಬಿಲ್ ಕೇಳಲು ಹೋದ ಜೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ

ಕಲಬುರಗಿ.ಜೂ 01:ವಿದ್ಯುತ್ ಬಾಕಿ ಬಿಲ್ ಕೇಳಲು ಹೋಗಿದ್ದ ಜೆಸ್ಕಾಂ ಸಿಬ್ಬಂದಿಗಳ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ ಘಟನೆ ಜಿಲ್ಲೆಯ ಆಳಂದ್ ಪಟ್ಟಣದ ಖಾಜಿ ಗಲ್ಲಿಯಲ್ಲಿ ವರದಿಯಾಗಿದೆ. ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ ಎಂದು ಹೇಳಿದಾಗಿನಿಂದಲೂ ಒಂದಿಲ್ಲ ಒಂದು ಸಮಸ್ಯೆಗಳು ಆಗುತ್ತಿದ್ದು, ಹಾಗಾಗಿ ಹಲವೆಡೆ ಸಾರ್ವಜನಿಕರು ಹಾಗೂ ಸರ್ಕಾರಿ ಸಿಬ್ಬಂದಿಗಳ ನಡುವೆ ಸಂಘರ್ಷಗಳು ಆಗುತ್ತಿದ್ದು, ಆ ಹಿನ್ನೆಲೆಯಲ್ಲಿ ಜೆಸ್ಕಾಂ ಸಿಬ್ಬಂದಿಯ ಮೇಲೂ ಹಲ್ಲೆಯಾಗಿದೆ.
ಆಳಂದ್ ಪಟ್ಟಣದ ಖಾಜಿ ಗಲ್ಲಿಯಲ್ಲಿ ವಿದ್ಯುತ್ ಬಾಕಿ ಬಿಲ್ ಪಾವತಿಸಲು ಕೇಳಲು ಹೋದ ಜೆಸ್ಕಾಂ ಕಿರಿಯ ಅಭಿಯಂತರ ಸಿದ್ದರಾಮಪ್ಪ ಮತ್ತು ಲೈನ್‍ಮ್ಯಾನ್ ಇಜಾಜ್ ಅವರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಬ್ಬಿಣದ ರಾಡ್ ಮತ್ತು ಕಲ್ಲಿನಿಂದ ಹಲ್ಲೆ ಮಾಡಲಾಗಿದೆ. ವಸೀಂ ಜವಳೆ ಎನ್ನುವವರು ದಾಬಾ ಮತ್ತು ಮನೆಯ 13000ರೂ.ಗಳ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದರು. ಕಳೆದ ಆರು ತಿಂಗಳಿನಿಂದ ಮನೆಯ 3000ರೂ.ಗಳು ಮತ್ತು ದಾಬಾದ 7,300ರೂ.ಗಳ ವಿದ್ಯುತ್ ಬಿಲ್ ಬಾಕಿ ಪಾವತಿಸದೇ ನಿರ್ಲಕ್ಷಿಸುತ್ತಿದ್ದ. ಪ್ರತಿ ತಿಂಗಳೂ ವಿದ್ಯುತ್ ಬಿಲ್ ಪಾವತಿಸಲು ಸಿಬ್ಬಂದಿಗಳು ಹೇಳಿದರೂ ಸಹ ಅವರೊಂದಿಗೆ ಜಗಳ ಮಾಡುತ್ತಿದ್ದ. ಇದರಿಂದಾಗಿ ಬಾಕಿ ಪಾವತಿಸದ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು. ಹಾಗಾಗಿ ಕಿರಿಯ ಅಭಿಯಂತರ ಮತ್ತು ಲೈನ್‍ಮ್ಯಾನ್ ಮೇಲೆ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಹಲ್ಲೆಯಿಂದಾಗಿ ಜೆಸ್ಕಾಂ ಕಿರಿಯ ಅಭಿಯಂತರ ಸಿದ್ರಾಮಪ್ಪ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರಿಗೆ ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.