ವಿದ್ಯುತ್ ಬಿಲ್ ಕಟ್ಟ ಬೇಡಿ,ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿ

ಬೆಂಗಳೂರು,ಮೇ೨೬:ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡದೆ ಜನರಿಗೆ ಮೋಸ ಮಾಡುತ್ತಿದೆ. ಯಾರು ವಿದ್ಯುತ್ ಬಿಲ್ ಕಟ್ಟಬೇಡಿ, ಹಾಗೆಯೇ ಮಹಿಳೆಯರು ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಿ ಎಂದು ಬಿಜೆಪಿಯ ಮಾಜಿ ಸಚಿವ ಹಾಗೂ ಶಾಸಕ ಆರ್. ಅಶೋಕ್ ಹೇಳಿದರು.
ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಯಾರೂ ವಿದ್ಯುತ್ ಬಿಲ್ ಕಟ್ಟಬಾರದು ಎಂದು ಹೇಳಿದ್ದರು. ಯಾರು ವಿದ್ಯುತ್ ಬಿಲ್ ಕಟ್ಟಬೇಡಿ ಒಂದು ವೇಳೆ ವಿದ್ಯುತ್ ಬಿಲ್ ಕಟ್ಟಿದರೆ ಅದು ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್‌ರವರಿಗೆ ಅವಮಾನ ಮಾಡಿದಂತೆ ಎಂದು ವ್ಯಂಗ್ಯವಾಡಿದರು.
ವಿದ್ಯುತ್ ಬಿಲ್ ಕಟ್ಟದವರ ವಿದ್ಯುತ್ ಸಂಪರ್ಕ ಕಡಿತ ಮಾಡಿದರೆ ಬಿಜೆಪಿ ಬೀದಿಗಿಳಿದು ಹೋರಾಟ ಮಾಡುತ್ತದೆ ಎಂದು ಅವರು ಹೇಳಿದರು.
ಗ್ಯಾರೆಂಟಿ ಯೋಜನೆಗಳಿಗೆ ಯಾವುದೇ ಷರತ್ತು ಇಲ್ಲ ಎಂದು ಕಾಂಗ್ರೆಸ್ ನಾಯಕರು ಚುನಾವಣಾ ಸಂದರ್ಭದಲ್ಲಿ ಹೇಳಿದ್ದಾರೆ. ಈಗ ಷರತ್ತುಗಳನ್ನು ಹಾಕುವುದು ಸರಿಯಲ್ಲ, ಯಾವುದೇ ಷರತ್ತಿಲ್ಲದೆ ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಬೇಕು. ಷರತ್ತು ಹಾಕಿದರೆ ಜನರಿಗೆ ಮೋಸ ಮಾಡಿದಂತೆ ಎಂದು ಹೇಳಿದರು.
ತಾಕತ್ತಿದ್ದರೆ ನಿಷೇಧ ಮಾಡಲಿ
ಕಾಂಗ್ರೆಸ್ ನಾಯಕರು ಆರ್‌ಎಸ್‌ಎಸ್‌ನ್ನು ನಿಷೇಧ ಮಾಡುವುದಾಗಿ ಹೇಳುತ್ತಿದ್ದಾರೆ. ತಾಕತ್ತಿದ್ದರೆ, ಧಂ ಇದ್ದರೆ ಆರ್‌ಎಸ್‌ಎಸ್‌ನ್ನು ನಿಷೇಧ ಮಾಡಲಿ ಆರ್‌ಎಸ್‌ಎಸ್‌ನ್ನು ನಿಷೇಧ ಮಾಡಿದರೆ ೩ ತಿಂಗಳು ಈ ಸರ್ಕಾರ ಅಧಿಕಾರದಲ್ಲಿರಲ್ಲ ಎಂದು ಗುಡುಗಿದರು.
ಕಾಂಗ್ರೆಸ್ ನಾಯಕರಾದ ರಾಹುಲ್‌ಗಾಂಧಿ ಅವರ ಅಜ್ಜಿ, ಮುತ್ತಾತ ಅವರ ಕೈಯಿಂದಲೇ ಆರ್‌ಎಸ್‌ಎಸ್‌ನ್ನು ಬ್ಯಾನ್ ಮಾಡಲು ಆಗಲಿಲ್ಲ. ಈಗ ಮಾಡಲು ಆಗುತ್ತಿದೆಯೇ, ಆರ್‌ಎಸ್‌ಎಸ್ ಒಂದು ದೇಶಭಕ್ತ ಸಂಘಟನೆ, ರಾಷ್ಟ್ರಪತಿಗಳು, ಪ್ರಧಾನಿಗಳು, ಕೇಂದ್ರ ಗೃಹ ಸಚಿವರು ಎಲ್ಲರೂ ಆರ್‌ಎಸ್‌ಎಸ್‌ನವರೇ ಎಂದು ಆರ್. ಅಶೋಕ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ಎನ್. ರವಿಕುಮಾರ್ ಉಪಸ್ಥಿತರಿದ್ದರು.