ವಿದ್ಯುತ್ ಪ್ರವಹಿಸುವ ಸ್ಥಳಗಳಿಂದ ಅಂತರ ಕಾಯ್ದುಕೊಳ್ಳಬೇಕು

ಸಂಜೆವಾಣಿ ವಾರ್ತೆ
ಹನೂರು ಫೆ 18 :- ಮಳೆಗಾಲ, ಬಿರುಗಾಳಿ ವೇಳೆ ತೇವಾಂಶ ಇರುವ ಸ್ಥಳಗಳಲ್ಲಿ ವಿದ್ಯುತ್ ಅಪಘಾತಗಳಾಗುತ್ತವೆ. ಈ ವೇಳೆ ಜನರು ಎಚ್ಚೆತ್ತುಕೊಂಡು ವಿದ್ಯುತ್ ಪ್ರವಹಿಸುವ ಸ್ಥಳಗಳಿಂದ ಅಂತರ ಕಾಯ್ದುಕೊಂಡರೆ ಒಳ್ಳೆಯದು ಎಂದು ಹನೂರು ಎಇಇ ಶಂಕರ್ ಸಲಹೆ ನೀಡಿದರು.ತಾಲೂಕಿನ ರಾಮಪುರ ಶಾಖೆಯ ಅವರಣದಲ್ಲಿ ಶುಕ್ರವಾರದಂದು ಹಮ್ಮಿಕೊಂಡಿದ್ದ “ವಿದ್ಯುತ್ ಸೇವೆಗಳು ಮತ್ತು ಸುರಕ್ಷತಾ ಅರಿವು ಸಪ್ತಾಹ” ಕಾರ್ಯಕ್ರಮದಲ್ಲಿ ತಿಳಿಸಿದ ಅವರು ವಿದ್ಯುತ್ ಅಪಘಾತಗಳು ಆಗದಂತೆ ಎಷ್ಟೋ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿದ್ದರೂ ಕೆಲವೊಂದು ಅಚಾತುರಯಗಳಿಂದ ದುರಂತಗಳು ಸಂಭವಿಸುತ್ತಿದೆ. ಕಟ್ಟಡಗಳನ್ನು ವಿದ್ಯುತ್ ತಂತಿಗಳ ಸಮೀಪ ನಿರ್ಮಿಸಬಾರದು. ತುಂಡಾಗಿ ಬಿದ್ದ ವಿದ್ಯುತ್ ತಂತಿಗಳನ್ನು ಮುಟ್ಟಬಾರದು, ವಿದ್ಯುತ್ ಸ್ವಿಚ್‍ಗಳು, ವಿದ್ಯುತ್ ಉಪಕರಣಗಳನ್ನು ಒದ್ದೆ ಕೈಗಳಿಂದ ಮುಟ್ಟಬಾರದು. ವಿದ್ಯುತ್ ಕಂಬಗಳಿಗೆ ಬ್ಯಾನರ್, ಜಾಹೀರಾತು ಫಲಕಗಳನ್ನು ಕಟ್ಟಬಾರದು ಇದರಿಂದ ವಿದ್ಯುತ್ ಅಪಘಾತಗಳು ಸಂಭವಿಸುತ್ತಿವೆ.
ವಿದ್ಯಾರ್ಥಿಗಳು, ರೈತರು ಹಾಗೂ ಸಾರ್ವಜನಿಕರು ವಿದ್ಯುತ್ ಬಳಕೆಯಲ್ಲಿ ಎಚ್ಚರವಹಿಸಬೇಕು. ಕಾನೂನು ಬಾಹಿರವಾಗಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆಯಬಾರದು. ವಿದ್ಯುತ್ ಸಂಬಂಧಿತ ಸಮಸ್ಯೆಗಳಿದ್ದರೆ ಅದನ್ನು ಇಲಾಖೆ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹನೂರು ಚೆಸ್ಕಾಂ ಸಹಾಯಕ ಇಂಜಿನಿಯರ್ ರಂಗಸ್ವಾಮಿ ಹಾಗೂ ಗ್ರಾಹಕರರು ಸಾರ್ವಜನಿಕರು ಹಾಜರಿದ್ದರು.