ವಿದ್ಯುತ್ ಪೂರೈಕೆಗೆ ಒತ್ತಾಯ

ಬ್ಯಾಡಗಿ, ಮಾ 30: ತಾಲೂಕಿನ ಶಿಡೇನೂರ, ಹಿರೇನಂದಿಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರ ಪಂಪ್’ಸೆಟ್’ಗಳಿಗೆ ಪೂರೈಕೆಯಾಗುತ್ತಿರುವ ಅಸಮರ್ಪಕ ವಿದ್ಯುತ್ ಪೂರೈಕೆಯನ್ನು ಬದಲಾಯಿಸಿ ಹಗಲು ಹೊತ್ತಿನಲ್ಲಿಯೇ ಅಧಿಕ ಪ್ರಮಾಣದಲ್ಲಿ ವಿದ್ಯುತ್ ಪೂರೈಕೆ ಮಾಡಬೇಕೆಂದು ಹೆಸ್ಕಾಂ ಉಪವಿಭಾಗದ ಎಇಇ ಹಾಲೇಶ ಅಂತರವಳ್ಳಿ ಅವರಿಗೆ ತಾಲೂಕಾ ರೈತ ಸಂಘದ ವತಿಯಿಂದ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಪಟ್ಟಣದ ಹೆಸ್ಕಾಂ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ನಂತರ ಮಾತನಾಡಿದ ತಾಲೂಕಾ ರೈತ ಸಂಘದ ಕಾರ್ಯಾಧ್ಯಕ್ಷ ಕಿರಣ ಗಡಿಗೋಳ ಅವರು, ಕಳೆದ 15ದಿನಗಳಿಂದ ಅಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದ್ದು, ಇದರಿಂದ ರೈತರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಅಲ್ಲದೇ ಕೆಲ ದಿನಗಳಿಂದ ಶಿಡೇನೂರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆಯ ಭಯದ ವಾತಾವರಣ ಸೃಷ್ಟಿಯಾಗಿದ್ದು, ರಾತ್ರಿ ಹೊತ್ತು ಜಮೀನುಗಳಿಗೆ ನೀರನ್ನು ಹಾಯಿಸಲು ಹೋಗೋಕೆ ಭಯ ಕಾಡುತ್ತಿದೆ. ಕಾರಣ ಹೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಅರಿತುಕೊಂಡು ಹಗಲು ಹೊತ್ತಿನಲ್ಲಿ 5ಗಂಟೆ ಹಾಗೂ ರಾತ್ರಿ ಹೊತ್ತು 2ಗಂಟೆ ಅವಧಿಗೆ ವಿದ್ಯುತ್ ಪೂರೈಕೆ ಮಾಡಲು ಕ್ರಮ ವಹಿಸಿದರೆ ರೈತರಿಗೆ ಬಹಳಷ್ಟು ಅನುಕೂಲವಾಗುತ್ತದೆ ಎಂದು ತಿಳಿಸಿದರಲ್ಲದೆ ಈ ಕುರಿತು ತಾವುಗಳು ನಿರ್ಲಕ್ಷ್ಯ ತೋರಿದರೆ ಕಚೇರಿಯ ಮುಂದೆ ಪ್ರತಿಭಟನೆ ನಡೆಸುವುದು ಖಚಿತವೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಚನಬಸಯ್ಯ ಹಿರೇಮಠ, ಉಮೇಶ ಶಿವಪೂಜಿ, ಸಿದ್ದಲಿಂಗಪ್ಪ ಮೂಲಿಮನಿ, ಕರಬಸಪ್ಪ ಕಬ್ಬೂರ, ಶಿವರಾಜ ದೊಡ್ಡಮನಿ, ಚನಬಸಪ್ಪ ಮತ್ತೂರು, ಕಲ್ಲಯ್ಯ ಹಿರೇಮಠ, ಮಹದೇವಪ್ಪ ಬಣಕಾರ, ಸೋಮಯ್ಯ ಹಿರೇಮಠ, ಶಿದ್ದಪ್ಪ ದೊಡ್ಡಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.