ವಿದ್ಯುತ್ ನೌಕರರ ಮುಷ್ಕರ ವಾಪಸ್

ಬೆಂಗಳೂರು,ಮಾ.೧೫:ಇಂಧನ ಇಲಾಖೆಯ ನೌಕರರ ವೇತನವನ್ನು ಶೇ. ೨೦ ರಷ್ಟು ಹೆಚ್ಚಳ ಮಾಡಲು ಸರ್ಕಾರ ಸಮ್ಮತಿಸಿರುವುದರಿಂದ ನಾಳೆಯಿಂದ ನಡೆಯಬೇಕಿದ್ದ ಮುಷ್ಕರವನ್ನು ನೌಕರರು ವಾಪಸ್ ಪಡೆದಿದ್ದಾರೆ.
ಕೆಪಿಟಿಸಿಎಲ್ ಮತ್ತು ಎಲ್ಲ ಎಸ್ಕಾಂಗಳ ನೌಕರರು ವೇತನ ಹೆಚ್ಚಳಕ್ಕೆ ಆಗ್ರಹಿಸಿ ನಾಳೆಯಿಂದ ಮುಷ್ಕರಕ್ಕೆ ಕರೆ ನೀಡಿದ್ದರು. ಸರ್ಕಾರ ನೌಕರರ ವೇತನವನ್ನು ೨೦೨೨ರ ಏಪ್ರಿಲ್‌ನಿಂದಲೇ ಪೂರ್ವಾನ್ವಯವಾಗುವಂತೆ ಶೇ. ೨೦ ರಷ್ಟು ಹೆಚ್ಚಳ ಮಾಡಲು ಒಪ್ಪಿದೆ. ಹಾಗಾಗಿ, ನಾಳಿನ ಮುಷ್ಕರವನ್ನು ವಾಪಸ್ ಪಡೆದಿದ್ದೇವೆ ಎಂದು ಕೆಇಬಿ ಇಂಜಿನಿಂiiರ್‌ಗಳ ಸಂಘದ ಅಧ್ಯಕ್ಷ ಶಿವಣ್ಣ ತಮ್ಮನ್ನು ಸಂಪರ್ಕಿಸಿದ ’ಸಂಜೆ ವಾಣಿ”ಗೆ ತಿಳಿಸಿದರು.
ಸರ್ಕಾರ ನಮ್ಮ ಬೇಡಿಕೆಗೆ ಒಪ್ಪಿದ್ದರಿಂದ ನಾಳಿನ ಮುಷ್ಕರ ನಡೆಯುವುದಿಲ್ಲ. ಎಲ್ಲ ನೌಕರರು ಎಂದಿನಂತೆ ಕೆಲಸಕ್ಕೆ ಹಾಜರಾಗುವರು ಎಂದು ಸ್ಪಷ್ಟಪಡಿಸಿದರು.
ಸರ್ಕಾರ ನೌಕರರ ಶೇ. ೨೦ ರಷ್ಟು ವೇತನ ಏರಿಕೆಗೆ ನಮ್ಮ ಸಮ್ಮತಿ ಇದೆ. ಸರ್ಕಾರಿ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಸರ್ಕಾರದ ಆದೇಶ ಇಂದೇ ಹೊರಡಿಸಬೇಕು. ಆದೇಶ ಹೊರ ಬಿದ್ದರೆ ನಾಳಿನ ಮುಷ್ಕರವನ್ನು ವಾಪಸ್ ಪಡೆಯುತ್ತೇವೆ ಎಂದು ಕರ್ನಾಟಕ ವಿದ್ಯುತ್‌ಚ್ಛಕ್ತಿ ಮಂಡಳಿ ನೌಕರರ ಸಂಘ ಹಾಗೂ ಫೆಡರೇಷನ್‌ನ ಅಧ್ಯಕ್ಷ ಆರ್.ಹೆಚ್. ಲಕ್ಷ್ಮಿಪತಿ ’ಸಂಜೆ ವಾಣಿ’ಗೆ ತಿಳಿಸಿದರು.
ಶೇ.೨೦ ರಷ್ಟು ವೇತನ ಹೆಚ್ಚಳ ಸುನಿಲ್‌ಕುಮಾರ್
ನೌಕರರ ಮುಷ್ಕರದ ತೀರ್ಮಾನದ ಹಿನ್ನೆಲೆಯಲ್ಲಿ ಕೆಪಿಟಿಸಿಎಲ್ ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಜತೆ ಇಂದು ಚರ್ಚೆ ನಡೆಸಿ ಮುಖ್ಯಮಂತ್ರಿಗಳ ಜತೆಯೂ ಮಾತನಾಡಿ, ಅವರ ಸೂಚನೆಯಂತೆ ಶೇ. ೨೦ ರಷ್ಟು ವೇತನ ಏರಿಕೆಗೆ ಸಮ್ಮತಿಸಲಾಗಿದೆ ಎಂದು ಇಂಧನ ಸಚಿವ ವಿ. ಸುನಿಲ್‌ಕುಮಾರ್ ತಿಳಿಸಿದ್ದಾರೆ.
ಕೆಪಿಟಿಸಿಎಲ್ ಹಾಗೂ ಎಸ್ಕಾಂಗಳ ನೌಕರರಿಗೆ ಈಗಿರುವ ವೇತನದ ಮೇಲೆ ಶೇ. ೨೦ ರಷ್ಟು ವೇತನವನ್ನು ೨೦೨೨ ಏಪ್ರಿಲ್‌ನಿಂದ ಪೂರ್ವಾನ್ವಯವಾಗುವಂತೆ ಏರಿಕೆ ಮಾಡಬೇಕು ಎಂದು ಇಂಧನ ಸಚಿವ ವಿ. ಸುನಿಲ್‌ಕುಮಾರ್ ಆರ್ಥಿಕ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಅವರಿಗೆ ಟಿಪ್ಪಣಿ ಮೂಲಕ ಸೂಚನೆ ನೀಡಿದ್ದಾರೆ.
ಇಂಧನ ಇಲಾಖೆಯ ನೌಕರರು ಮುಷ್ಕರ ನಡೆಸಿದ್ದರೆ ರಾಜ್ಯಾದ್ಯಂತ ವಿದ್ಯುತ್ ಪರಿಸ್ಥಿತಿಯಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿತ್ತು. ಈಗ ಮುಷ್ಕರ ವಾಪಸ್ ಪಡೆದಿರುವುದು ಎಲ್ಲರಲ್ಲೂ ನಿರಾಳತೆ ತಂದಿದೆ.

ಶೇ. ೨೦ ರಷ್ಟು ವೇತನ ಹೆಚ್ಚಳಕ್ಕೆ ಸಮ್ಮತಿ.

ಆರ್ಥಿಕ ಇಲಾಖೆಗೆ ಟಿಪ್ಪಣಿ ಮೂಲಕ ಸೂಚನೆ.

ಕೆಪಿಟಿಸಿಎಲ್ ನೌಕರರರ ಮುಷ್ಕರ ವಾಪಸ್

೨೦೨೨ರ ಏಪ್ರಿಲ್‌ನಿಂದ ಪೂರ್ವಾನ್ವಯ.

ಎಂದಿನಂತೆ ನೌಕರರು ಕೆಲಸಕ್ಕೆ ಹಾಜರು.