ವಿದ್ಯುತ್ ಧರ ಹೆಚ್ಚಳ ವಿರೋಧಿಸಿ ಬಳ್ಳಾರಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.22: ರಾಜ್ಯದಲ್ಲಿ ಅವೈಜ್ಞಾನಿಕ ವಿದ್ಯುತ್ ದರ ಹೆಚ್ಚಳ ಹಿನ್ನಲೆಯಲ್ಲಿ ಕರ್ನಾಟಕ ವಾಣಿಜ್ಯ ಉದ್ಯಮಿಗಳ ಅಸೋಸಿಯೇಷನ್ ಕರೆಯ ಮೇರೆಗೆ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಬಳ್ಳಾರಿಯಲ್ಲಿ ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ ನೇತೃತ್ವದಲ್ಲಿ ಇಂದು ನಡೆದ ಬಳ್ಳಾರಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ದೊರೆಯಿತು. 
ಬಂದ್ ಹಿನ್ನಲೆಯಲ್ಲಿ ನಗರದ ವಿವಿಧ ಉತ್ಪಾದನಾ ವಲಯದ ಕ್ಷೇತ್ರಗಳಾದ  ಜೀನ್ಸ್ ಉದ್ಯಮ, ಕಾಟನ್ ಇಂಡಸ್ಟ್ರಿ, ಹೊಟೇಲ್   ಸೇರಿದಂತೆ ಬಹುತೇಕ ಎಲ್ಲಾ ಉದ್ಯಮಗಳು ಬಂದ್ ಮಾಡಲಾಗಿತ್ತು.  ಜೊತೆಗೆ ಸಿನಿಮಾ ಪ್ರದರ್ಶನ ಬಂದ್ ಆಗಿತ್ತು.
ಬಂದ್ ನಿಂದ ನಗರದ ಬೆಂಗಳೂರು ರಸ್ತೆ, ತೇರು ಬೀದಿ, ಕಾಳಮ್ಮ ಬೀದಿ, ಬ್ರಾಹ್ಮಣ ಬೀದಿ ಸೇರಿದಂತೆ ಪ್ರಮುಖ ರಸ್ತೆಗಳ ಅಂಗಡಿ ಮುಗ್ಗಟ್ಟುಗಳು ಮುಚ್ಚಿದ್ದವು.
ಪ್ರತಿಭಟನೆ:
ಛೇಂಬರ್ ಆಫ್ ಕಾಮರ್ಸ್‌‌ ಪದಾಧಿಕಾರಿಗಳ ಜೊತೆಗೆ ನಗರದ ವಿವಿಧ ನಲವತ್ತೈದು ಉದ್ಯಮ ಸಂಘಟನೆಗಳ ಸಾವಿರಕ್ಕೂ ಹೆಚ್ಚು ಉದ್ಯಮಿಗಳು, ಕಾರ್ಮಿಕರು ಸೆಂಟನರಿ ಹಾಲ್ ಬಳಿ ಸೇರಿ ಅಲ್ಲಿಂದ ಗಡಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ತೇರು ಬೀದಿ, ಗವಿಯಪ್ಪ ವೃತ್ತದ ಮೂಲಕ ಡಿಸಿ‌ಕಚೇರಿಗೆ ಬಂದು ಮನವಿ ಸಲ್ಲಿಸಲಾಯ್ತು.
ಉದ್ಯಮಗಳು ಉಳಿಯಬೇಕಂದ್ರೇ ವಿದ್ಯುತ್ ದರ ಕಡಿಮೆ ಮಾಡಬೇಕೆಂಬ ಘೋಷಣೆ ಕೂಗಲಾಯ್ತು.
ಸರ್ಕಾರದ ವಿರುದ್ಧ ನಮ್ಮ ಹೋರಾಟವಲ್ಲ. ಬಿಲ್ ಕಡಿಮೆ ಮಾಡದೇ ಇದ್ರೇ ಉದ್ಯಮ ಉಳಿಯಲ್ಲ.ಉದ್ಯಮಕ್ಕೆ ಪೂರಕವಾದ ವಾತಾವರಣ ಇಲ್ಲವಾದ್ರೇ ಮತ್ತೊಮ್ಮೆ ನಿರುದ್ಯೋಗ ಸೃಷ್ಟಿಯಾಗ್ತದೆ.
ಹೀಗಾಗಿ ಕೂಡಲೇ ವಿದ್ಯುತ್ ಬಿಲ್ ಪರಿಷ್ಕರಿಸಿ ಎಂದು ಉದ್ಯಮಿಗಳು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಛೇಂಬರ್ ಆಫ್ ಕಾಮರ್ಸ್ ನ ಜಿಲ್ಲಾ ಅಧ್ಯಕ್ಷ ಶ್ರೀನಿವಾಸರಾವ್, ಕಾರ್ಯದರ್ಶಿ ನಾಗಿರೆಡ್ಡಿ ಮೊದಲಾದವರು ಪಾಲ್ಗೊಂಡಿದ್ದರು‌
ತೊಂದರೆ ಇದ್ದಿಲ್ಲ:
ಸರ್ಕಾರಿ ಕಚೇರಿ, ಸಾರಿಗೆ ಸಂಚಾರ, ಶಾಲಾ ಕಾಲೇಜುಗಳ ಕಾರ್ಯಕ್ಕೆ ಯಾವುದೇ ಅಡ್ಡಿ ಇರಲಿಲ್ಲ.