ವಿದ್ಯುತ್ ಧರ ಏರಿಕೆ ವಿರುದ್ದ ಪ್ರತಿಭಟನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.16: ಕರ್ನಾಟಕ ವಿದ್ಯುತ್ ಬಳಕೆದಾರರ ಸಂಘ ಬಳ್ಳಾರಿ ಘಟಕದಿಂದ  ಇಂದು ನಗರದಲ್ಲಿ ವಿದ್ಯುತ್ ಬೆಲೆ ಏರಿಕೆ ವಿರೋಧಿಸಿ  ಜೆಸ್ಕಾಂ ಕಛೇರಿಯ ಮುಂಬಾಗದಲ್ಲಿ ಪ್ರತಿಭಟನೆ ನಡೆಸಲಾಯ್ತು.
ಈ ಸಂದರ್ಭದಲ್ಲಿ ಕರ್ನಾಟಕ ವಿದ್ಯುತ್ ಬಳಕೆದಾರರ ಸಂಘದ  ಬಳ್ಳಾರಿ ಘಟಕದ ಸಂಚಾಲಕ ಸೋಮಶೇಖರ್ ಗೌಡ ಮಾತನಾಡಿ  “ಈ  ತಿಂಗಳು ನೀಡಿರುವ ಬಿಲ್‌ಗಳನ್ನು ನೋಡಿ ಗ್ರಾಹಕರು ದಂಗಾಗಿ ಹೋಗಿದ್ದಾರೆ. ಏಕೆಂದರೆ ಹೊಸ ದರಗಳ ಪರಿಣಾಮವಾಗಿ ಏಕಾಏಕಿ ಕೆಲವಡೆ ದುಪ್ಪಟ್ಟು, ಕೆಲವಡೆ ಇದಕ್ಕೂ ಮೀರಿ ವಿದ್ಯುತ್ ಬಿಲ್ ಬಂದಿದೆ. ಕೋವಿಡ್ ಸಂದರ್ಭದಲ್ಲಿ ಅತ್ಯಂತ ಸಂಕಷ್ಟಮಯ ದಿನಗಳನ್ನು ಕಳೆದು, ಜನ ಜೀವನ ಕೊಂಚ ಚೇತರಿಸಿಕೊಳ್ಳುತ್ತಿದೆ. ಅದು ಅಲ್ಲದೆ ದಿನ ಬಳಕೆ ವಸ್ತುಗಳು, ಶಾಲಾ-ಕಾಲೇಜು ಶುಲ್ಕಗಳು, ಆರೋಗ್ಯ ಕುರಿತ ಖರ್ಚುಗಳು ಬಾರಿ ಏರಿಕೆಯಾಗಿರುವಾಗಿರುವ ಈ ಸಂದರ್ಭದಲ್ಲಿ, ಈ ತಿಂಗಳು ಬಂದಿರುವ ಬಿಲ್‌ನ್ನು ನೋಡಿ ಜನ ಸಾಮಾನ್ಯರು, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳು ಹೌಹಾರಿದ್ದಾರೆ. ನಿಗದಿತ ಶುಲ್ಕಗಳು, ವಿದ್ಯುತ್ ದರ, ಇಂಧನ ಹೊಂದಾಣಿಕೆ ಶುಲ್ಕಗಳ ಹೆಸರಿನಲ್ಲಿ ಏರಿಕೆ ಮಾಡಿರುವ ವಿದ್ಯುತ್ ಶುಲ್ಕಗಳು, ಸಂಕಷ್ಟದಲ್ಲಿರುವ ಜನತೆಯ ಗಾಯದ ಮೇಲೆ ಬರೆ ಎಳೆದಂತಾಗಿದೆ. ವಿದ್ಯುತ್ ಕ್ಷೇತ್ರವು  ಅವಶ್ಯಕವಾದ ಒಂದು ಸೇವಾ ಕ್ಷೇತ್ರವಾಗಿದ್ದು, ಇದನ್ನು ವ್ಯಾಪಾರಿ ಮನೋಭಾವದಿಂದ ನೋಡುತ್ತಿರುವುದು ಅತ್ಯಂತ ವಿಪರ್ಯಾಸದ ಸಂಗತಿಯಾಗಿದೆಂದರು.
ಒಂದೆಡೆ ಸರ್ಕಾರ ಉಚಿತ ವಿದ್ಯುತ್ ಬಗ್ಗೆ ಮಾತಾಡಿದರೆ, ಇನ್ನೊಂದೆಡೆ ಎಸ್ಕಾಂಗಳು ದರ ಏರಿಕೆ ಸಾಮಾನ್ಯ ಪ್ರಕ್ರಿಯೆ ಎಂಬಂತೆ ಮಾತಾನಾಡಿ ಕೈ ತೊಳೆದುಕೊಳ್ಳುತ್ತಿರುವುದು  ನೋವಿನ ಸಂಗತಿ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಕೂಡಲೆ ಮಧ್ಯಪ್ರವೇಶ ಮಾಡಿ
ವಿದ್ಯುತ್ ಧರ ಏರಿಕೆ ಹಿಂದಕ್ಕೆ ಪಡೆಯಬೇಕು ಎಂದರು.
ಪ್ರತಿಭಟನೆಯಲ್ಲಿ ದೇವದಾಸ್, ಗೋವಿಂದ್, ಶಾಂತಾ, ಮಹೇಶ್ ಗೌಡ, ಜಿ. ರುದ್ರಪ್ಪ ಆಂಟೋನಿ , ಚಿನ್ನಮ್ಮ, ಪರ್ವೀನ್, ಲಕ್ಷ್ಮಿ, ಉಮಾಶಂಕರ್, ಬಸವರಾಜ್ ಮತ್ತಿತರರು ಭಾಗವಹಿಸಿದ್ದರು.