ಕಲಬುರಗಿ,ಜೂ.16-ಪ್ರತಿ ಯೂನಿಟ್‍ಗೆ 70 ಪೈಸೆ ವಿದ್ಯುತ್ ದರ ಹೆಚ್ಚಿಸಿರುವುದನ್ನು ಈ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‍ಯುಸಿಐಸಿ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ನಂತರ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯವಸ್ಥಾಪಕ ನಿರ್ದೇಶಕರ ಮೂಲಕ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಲಾಯಿತು.
ಅವೈಜ್ಞಾನಿಕವಾಗಿರುವ ಹೊಸ ಸ್ಲ್ಯಾಬ್ ಪದ್ಧತಿಂiÀiನ್ನು ಕೈಬಿಟ್ಟು, ಹಳೆ ಸ್ಲ್ಯಾಬ್ ಪದ್ಧತಿ ಮುಂದುವರಿಸಬೇಕು, ಅಪ್ರಜಾತಾಂತ್ರಿಕವಾಗಿ ಮಾಡಿರುವ ವಿದ್ಯುತ್ ದರ ಏರಿಕೆಯನ್ನು ಕೂಡಲೇ ಕೈ ಬಿಡಬೇಕು ಎಂದು ಮನವಿಪತ್ರದಲ್ಲಿ ಆಗ್ರಹಿಸಲಾಗಿದೆ.
ಈ ವಿಷಯವನ್ನು ಸಚಿವ ಸಂಪುಟದಲ್ಲಿ ಪ್ರಸ್ತಾಪಿಸಿ ಹೊಸ ಸ್ಲ್ಯಾಬ್ ಪದ್ಧತಿಯನ್ನು ಕೈ ಬಿಡಬೇಕು ಹಾಗೂ ವಿದ್ಯುತ್ ದರ ಏರಿಕೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಲಾಗಿದೆ.
ಎಸ್‍ಯುಸಿಐಸಿ ಜಿಲ್ಲಾ ಕಾರ್ಯದರ್ಶಿ ಹೆಚ್.ವಿ.ದಿವಾಕರ್, ಜಿಲ್ಲಾ ಸಮಿತಿ ಸದಸ್ಯರಾದ ವಿ.ನಾಗಮ್ಮಾಳ, ರಾಮಣ್ಣ ಎಸ್.ಇಬ್ರಾಹಿಂಪೂರ, ಗಣಪತರಾವ ಕೆ.ಮಾನೆ, ಎಸ್.ಎಂ.ಶರ್ಮಾ, ವಿ.ಜಿ.ದೇಸಾಯಿ, ಮಹೇಶ ಎಸ್.ಬಿ., ಜಗನ್ನಾಥ ಎಸ್.ಹೆಚ್. ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.