ವಿದ್ಯುತ್ ದರ ಹೆಚ್ಚಳ ಕೈಗಾರಿಕೆಗಳಿಗೆ ಹೊಡೆತ ಎಫ್ ಕೆಸಿಸಿಐ ಆತಂಕ

ಬೆಂಗಳೂರು,ಜೂ.10-ಕೊರೊನಾ ಸಂಕಷ್ಟ ಕಬ್ಬಿಣ, ಉಕ್ಕು, ತೈಲ ಬೆಲೆಗಳು ಗಗನಕ್ಕೇರಿರುವ ಬೆನ್ನಲ್ಲೇ ವಿದ್ಯುತ್ ದರ ಹೆಚ್ಚಳ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ(ಎಫ್ ಕೆಸಿಸಿಐ)ತೀವ್ರವಾಗಿ ವಿರೋಧಿಸಿದೆ.
ವಿದ್ಯುತ್ ದರ ಹೆಚ್ಚಳವು ಎಲ್ಲಾ ವರ್ಗದ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗಲಿದ್ದು, ರಾಜ್ಯದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.ವಿದ್ಯುತ್ ದರ ಏರಿಕೆಯು ಕೈಗಾರಿಕೆಯ ಕಚ್ಚಾ ವಸ್ತುಗಳ ಬೆಲೆಯ ಮೇಲೆಯೂ ಸಹ ಪರಿಣಾಮ ಬರಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಪೆರಿಕಲ್ ಎಂ ಸುಂದರ್ ಅವರು ತಿಳಿಸಿದ್ದಾರೆ.
ಕೊರೊನಾ ಸಂಕಷ್ಟದ ಪರಿಸ್ಥಿತಿಯಿಂದಾಗಿ ಮುಂದಿನ 2-3 ವರ್ಷವರೆಗೆ ವಿದ್ಯುತ್ ದರದ ಹೆಚ್ಚಳದ ಪ್ರಕ್ರಿಯೆಗಳನ್ನು ಮುಂದೂಡಿ ಕೈಗಾರಿಕೆಗಳ ಬೆಳೆವಣಿಗೆಗೆ ಹಾಗೂ ರಾಜ್ಯದ ಆರ್ಥಿಕತೆ ಸುಧಾರಣೆಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದ್ದರೂ ಸಹ ವಿದ್ಯುತ್ ದರ ಹೆಚ್ಚಳ ಮಾಡಿರುವುದನ್ನು ಖಂಡಿಸಿದರು
ರಾಜ್ಯ ಸರ್ಕಾರದ ಆಕರ್ಷಕ ಹೂಡಿಕೆ ಸ್ನೇಹಿ ಕೈಗಾರಿಕಾ ನೀತಿ 2020-25, ಕೈಗಾರಿಕಾ ಸೌಲಭ್ಯ ಕಾಯಿದೆಯಲ್ಲಿನ ಶ್ಲಾಘನೀಯ ಸುಧಾರಣೆಗಳು ಮತ್ತು ಹೂಡಿಕೆಯನ್ನು ಆಕರ್ಷಿಸಲು ಹಾಗೂ ಉದ್ಯೋಗವನ್ನು ಸೃಷ್ಟಿಸಲು ಕರ್ನಾಟಕ ಭೂ ಸುಧಾರಣಾ ಕಾಯ್ದೆಯಲ್ಲಿನ ದಿಟ್ಟ ಸುಧಾರಣೆಗಳನ್ನು ತಂದ ರಾಜ್ಯ ಸರ್ಕಾರದ ಪ್ರಯತ್ನಗಳು ಈ ವಿದ್ಯುತ್ ದರ ಹೆಚ್ಚಳದ ನಿರ್ಧಾರದಿಂದಾಗಿ ವ್ಯರ್ಥವಾಗಲಿವೆ ಎಂದು ತಿಳಿಸಿದರು.
ಕೋವಿಡ್ ಲಾಕ್‍ಡೌನ್ ಪರಿಣಾಮದಿಂದಾಗಿ ರಾಜ್ಯದ 90ರಷ್ಟು‌ ಕೈಗಾರಿಕಾ ತಮ್ಮ ಕಾರ್ಯಚರಣೆ ಸ್ಥಗಿತಗೊಳಿಸಿವೆ. ಬಹಳಷ್ಟು ಕೈಗಾರಿಕೆಗಳು ವಿಶೇಷವಾಗಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಮತ್ತು ಸಣ್ಣ ವ್ಯಾಪಾರಿಗಳು ತಮ್ಮ ಅಸ್ಥಿತ್ವದ ಉಳಿವಿಗಾಗಿ ಹೆಣಗಾಡುತ್ತಿವೆ ಹಾಗೂ ತಮ್ಮ ಕಾರ್ಯಚರಣೆಯನ್ನು ಮುಚ್ಚುವ ಹಂತದಲ್ಲಿದ್ದಾರೆ. ಇದು ರಾಜ್ಯದಲ್ಲಿ ನಿರುದ್ಯೋಗ ಸೃಷ್ಟಿಸುವ ಮುನ್ಸೂಚನೆಯನ್ನು ನೀಡುತ್ತಿವೆ ಎಂದಿದ್ದಾರೆ.