ಶಿವಮೊಗ್ಗ.ಜೂ.೧೪: ವಿದ್ಯುತ್ ದರ ಹೆಚ್ಚಿಸಿರುವ ಆದೇಶವನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕು. ಕೈಗಾರಿಕೆಗಳಿಗೆ ಆಗುವ ತೊಂದರೆಯನ್ನು ತಪ್ಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಮ ಕೈಗೊಳ್ಳಬೇಕೆಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಆಗ್ರಹಿಸಿದೆ.2023ನೇ ಸಾಲಿನಲ್ಲಿ ಅವೈಜ್ಞಾನಿಕವಾಗಿ ವಿದ್ಯುತ್ ದರ ಪರಿಷ್ಕರಿಸಿರುವುದಕ್ಕೆ ವಿರೋಧವಿದೆ. ವಿದ್ಯುತ್ ದರ ಹೆಚ್ಚಳಕ್ಕೆ ರಾಜ್ಯಾದ್ಯಂತ ಕೈಗಾರಿಕಾ ಸಂಘಟನೆಗಳು ಸೇರಿ ವಿವಿಧ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ದರ ಹೆಚ್ಚಳದಿಂದ ಕೈಗಾರಿಕೆಗಳಿಗೆ ಹಾಗೂ ಜನಸಾಮಾನ್ಯ ಗ್ರಾಹಕರಿಗೆ ಅತಿಯಾದ ಹೊರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯದ ಕೈಗಾರಿಕಾ ಘಟಕಗಳು ತುಂಬಾ ರೋಗಗ್ರಸ್ಥ ಘಟಕಗಳಾಗಿ ಅಭಿವೃದ್ಧಿ ಕುಂಠಿತವಾಗಿವೆ. ನಿರುದ್ಯೋಗ ಸಮಸ್ಯೆಯ ಉದ್ಭವಕ್ಕೆ ಕಾರಣವಾಗುತ್ತದೆ. ಹೆಚ್ಚಿನ ಕೈಗಾರಿಕೆಗಳು ಹಣಕಾಸು ಸಂಸ್ಥೆಗಳಿಂದ, ಬ್ಯಾಂಕ್‌ಗಳಿಂದ ಸಾಲ ಪಡೆದು ಉದ್ಯಮವನ್ನು ನಡೆಸುತ್ತಿರುವವರಿಗೆ ಆರ್ಥಿಕತೆ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರಿ ಉದ್ಯಮವನ್ನು ಮುಚ್ಚುವ ಪರಿಸ್ಥಿತಿಗೆ ಬರಬೇಕಾಗುತ್ತದೆ ಎಂದು ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ತಿಳಿಸಿದ್ದಾರೆ.ಕೈಗಾರಿಕೋದ್ಯಮಿಗಳು ಮತ್ತು ಸಾಮಾನ್ಯ ಗೃಹೋಪಯೋಗಿ ಗ್ರಾಹಕರು ತಮ್ಮ ಅಸ್ಥಿತ್ವವನ್ನು ಉಸಿಕೊಳ್ಳಲು ಅನಿವಾರ್ಯವಾಗಿ ಪ್ರತಿಭಟನೆಗೆ ಇಳಿಯುವ ಪ್ರಸಂಗ ಬರಬಹುದು. ನಾಗರೀಕ ಸಂಘಟನೆಗಳು ಕೂಡ ದರ ಹೆಚ್ಚಳದ ವಿರುದ್ಧ ಧ್ವನಿ ಎತ್ತಿವೆ. ತೈಲಬೆಲೆಗಳು ಈಗಾಗಲೆ ಗಗನಕ್ಕೇರಿದ್ದು, ವಿದ್ಯುತ್ ದರ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ವಿದ್ಯುತ್ ದರ ಹೆಚ್ಚಳ ಆದೇಶವು ಎಲ್ಲಾ ವರ್ಗದ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗಲಿದ್ದು, ರಾಜ್ಯದ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ. ಕೈಗಾರಿಕೆಯ ಕಚ್ಛಾವಸ್ತುಗಳ ಬೆಲೆಯ ಮೇಲೆಯೂ ಕೂಡ ಪರಿಣಾಮ ಆಗಲಿದೆ. ಕೈಗಾರಿಕೆಗಳು ಮೂಲೆ ಗುಂಪಾಗುವುದರಲ್ಲಿ ಸಂಶಯವಿಲ್ಲ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಅಭಿಪ್ರಾಯಪಟ್ಟಿದ್ದಾರೆ.ಜನಸಾಮಾನ್ಯರ ಆರ್ಥಿಕ ಹೊರೆ ತಪ್ಪಿಸಲು, ರಾಜ್ಯದ ಅಭಿವೃದ್ಧಿಯಲ್ಲಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ನೆಲೆಯಲ್ಲಿ ವಿದ್ಯುತ್ ದರ ಪರಿಷ್ಕರಣೆಯ ಹೆಚ್ಚುವರಿ ಹೊರೆಯ ಆದೇಶವನ್ನು ಕೂಡಲೇ ವಾಪಾಸ್ಸು ಪಡೆಯುವಂತೆ ಸಂಘವು ಸರ್ಕಾರವನ್ನು ಒತ್ತಾಯಿಸುತ್ತದೆ.