ವಿದ್ಯುತ್ ದರ ಹೆಚ್ಚಳದ ವಿರುದ್ಧ ಕಲಬುರಗಿ ಬಂದ್: ಕಮ್ಯುನಿಸ್ಟ್ ಪಕ್ಷದ ಬೆಂಬಲ

ಕಲಬುರಗಿ,ಜೂ.21: ವಿದ್ಯುತ್ ದರ ಹೆಚ್ಚಳ ವಿರೋಧಿಸಿ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್‍ಮತ್ತು ಇಂಡಸ್ಟ್ರೀಸ್ ಅವರು ಜೂನ್ 22ರಂದು ನೀಡಿರುವ ಬಂದ್ ಕರೆಯನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ) ಬೆಂಬಲಿಸಲಿದೆ ಎಂದು ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಅಲ್ತಾಫ್ ಇನಾಂದಾರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸಹಜ ವಿದ್ಯುತ್ ಏರಿಕೆಯು ಖಂಡನಾರ್ಹವಾಗಿದೆ. ಹಾಗಾಗಿ ಪ್ರತಿಭಟನೆಯನ್ನು ಪಕ್ಷವು ಬೆಂಬಲಿಸಲಿದೆ ಎಂದರು.
ವಿದ್ಯುತ್ ದರ ಹೆಚ್ಚಳವನ್ನು ವಿರೋಧಿಸಿ ಕಳೆದ ಹತ್ತರಂದು ಮನವಿ ಸಲ್ಲಿಸಿ ಹೆಚ್ಚಳದ ದರವನ್ನು ಹಿಂಪಡೆಯಲು ಹತ್ತು ದಿನಗಳ ಗಡುವು ಕೊಡಲಾಗಿತ್ತು. ಆದಾಗ್ಯೂ, ಬೇಡಿಕೆಗೆ ಸ್ಪಂದಿಸದೇ ಇದ್ದುದರಿಂದ ಪ್ರತಿಭಟನೆಗೆ ಬೆಂಬಲಿಸುತ್ತಿದ್ದೇವೆ ಎಂದು ಅವರು ಹೇಳಿದರು.
ವಿದ್ಯುತ್ ದರವನ್ನು ಹಠಾತ್ತನೇ ಮೂರ್ನಾಲ್ಕು ಪಟ್ಟು ಹೆಚ್ಚಿಸಲಾಗಿದೆ. ಇದರಿಂದಾಗಿ ಕರ್ನಾಟಕದ ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರಕ್ಕೆ ತುಂಬಾ ಸಮಸ್ಯೆಯಾಗಿದೆ. ಇದರಿಂದಾಗಿ ಕೈಗಾರಿಕೆಗಳು ಮುಚ್ಚುವ ಭೀತಿಯಲ್ಲಿವೆ. ಸಾವಿರಾರು ಕಾರ್ಮಿಕರು ಬೀದಿ ಪಾಲಾಗಲಿದ್ದಾರೆ. ಆ ಹಿನ್ನೆಲೆಯಲಿ ಹೆಚ್ಚುವರಿ ದರವನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಂ.ಬಿ. ಸಜ್ಜನ್, ಗೌರಮ್ಮ ಪಾಟೀಲ್, ನಾಗಯ್ಯಸ್ವಾಮಿ, ಜಾವೇದ್ ಹುಸೇನ್ ಮುಂತಾದವರು ಉಪಸ್ಥಿತರಿದ್ದರು.