ವಿದ್ಯುತ್ ದರ ಏರಿಕೆ ವಿರೋಧಿಸಿ ಕೈ ಹೋರಾಟ

ಬೆಂಗಳೂರು, ನ. ೯- ರಾಜ್ಯ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಏರಿಕೆ ಮಾಡಿರುವ ವಿದ್ಯುತ್ ದರವನ್ನು ಕೈಬಿಡಬೇಕು ಇಲ್ಲದಿದ್ದರೆಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷಡಿ.ಕೆ. ಶಿವಕುಮಾರ್ ಹೇಳಿದರು.
ಪ್ರದೇಶ ಕಾಂಗ್ರೆಸ್ ಕಛೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನೊಂದು ವಾರದೊಳಗೆ ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆಯನ್ನು ವಾಪಸ್ ಪಡೆಯದಿದ್ದರೆ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಧರಣಿಗಳನ್ನು ಕಾಂಗ್ರೆಸ್ ಪಕ್ಷ ನಡೆಸಲಿದೆ ಎಂದರು.
ಕೋವಿಡ್‌ನಿಂದ ಜನ ಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ವಿದ್ಯುತ್ ದರ ಏರಿಕೆ ಸರಿಯಲ್ಲ ಎಂದ ಅವರು, ದರ ಏರಿಕೆ ಕೈಬಿಡದಿದ್ದರೆ ಈ ತಿಂಗಳ ೧೭ ರಿಂದ ೨೦ ರವರೆಗೆ ಜಿಲ್ಲಾ ಕೇಂದ್ರಗಳಲ್ಲಿ, ೨೩ ರಿಂದ ೨೮ ರವರೆಗೆ ತಾಲ್ಲೂಕು ಕೇಂದ್ರಗಳಲ್ಲಿ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸಲಿದೆ ಎಂದು ಅವರು ಹೇಳಿದರು.
ತನಿಖೆ
ಕುಲಪತಿ ಸ್ಥಾನದ ನಿರೀಕ್ಷೆಯಲ್ಲಿದ್ದ ಬೆಂಗಳೂರು ವಿವಿಯ ನಿವೃತ್ತ ಪ್ರೊ. ಅಶೋಕ್‌ಕುಮಾರ್ ರವರ ಆತ್ಮಹತ್ಯೆ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಆತ್ಮಹತ್ಯೆ ಮಾಡಿಕೊಂಡ ಪ್ರೊ. ಅಶೋಕ್‌ಕುಮಾರ್ ಅವರಿಂದ ಕೆಲ ಸಚಿವರು, ಅಧಿಕಾರಿಗಳು ಕುಲಪತಿ ಸ್ಥಾನ ನೀಡುವುದಾಗಿ ಹಣ ಪಡೆದು ವಂಚಿಸಿದ್ದು, ಇದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಈ ಸಾವಿನ ಸತ್ಯಾಸತ್ಯತೆ ಹೊರ ಬರಲು ತನಿಖೆ ನಡೆಸುವಂತೆ ಅವರು ಒತ್ತಾಯಿಸಿದರು.
ಕುಲಪತಿ ನೇಮಕಾತಿಯಲ್ಲಿ ಭ್ರಷ್ಟಾಚಾರ ಎಗ್ಗಿಲ್ಲದೆ ನಡೆದಿದೆ ಎಂದು ಅವರು ದೂರಿದರು.