ವಿದ್ಯುತ್ ದರ ಏರಿಕೆ ವಿರುದ್ದ ಬಿಜೆಪಿ ಪ್ರತಿಭಟನೆ


ಗುಳೇದಗುಡ್ಡ ಜೂ.29- ಪ್ರತಿ ಕುಟುಂಬದವರಿಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ವಿದ್ಯುತ್ ದರವನ್ನು ದುಪ್ಪಟ್ಟಾಗಿ ಏರಿಕೆ ಮಾಡುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ. ಅಲ್ಲದೆ 10ಕೆಜಿ ಅಕ್ಕಿ, ನಿರುದ್ಯೋಗಿ ಭತ್ಯೆ ನೀಡಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಕಾಂಗ್ರೆಸ ಸರ್ಕಾರಕ್ಕೆ ಆಗ್ರಹಿಸಿದರು.
ಅವರು ಪಟ್ಟಣದಲ್ಲಿ ವಿದ್ಯುತ್ ದರ ಏರಿಕೆ ಖಂಡಿಸಿ ಸರ್ಕಾರದ ವಿರುದ್ಧ ಹೆಸ್ಕಾಂ ಕಚೇರಿ ಎದುರಿಗೆ ಹಮ್ಮಿಕೊಂಡ ಬೃಹತ್ ಪ್ರತಿಭಟನೆ ಮತ್ತು ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿ, 200ಯೂನಿಟ್ ವಿದ್ಯುತ್ ಉಚಿತ ಅಂದಿದ್ದೀರಿ ಅದಕ್ಕೆ ಜನರು ನಿಮಗೆ ಓಟು ಹಾಕಿದ್ದಾರೆ. ಈಗ ಅವರಿಗೆ 200ಯೂನಿಟ್ ಉಚಿತ ವಿದ್ಯುತ್ ಕೊಡಬೇಕು, ಅಲ್ಲದೇ ಈಗಿನ ವಿದ್ಯುತ್ ದರ ಏರಿಕೆ ಅದು ಬಿಜೆಪಿ ಸರ್ಕಾರದ್ದು ಎಂದು ನೀವು ಹೇಳುತ್ತೀರಲ್ಲ, ಹಾಗಿದ್ದರೇ ಬಿಜೆಪಿ ಸರ್ಕಾರದಲ್ಲಿನ ಎಲ್ಲ ಕಾಮಗಾರಿಗಳನ್ನೇ ತಡೆದಿದ್ದೀರಿ, ಅದರಂತೆ ವಿದ್ಯುತ್ ದರ ಹೆಚ್ಚಳದ ಆದೇಶವನ್ನು ನೀವು ತಡೆಯಬೇಕಿತ್ತು ಎಂದು ಕಾಂಗ್ರೆಸ ಸರ್ಕಾರಕ್ಕೆ ಛಾಟಿ ಬೀಸಿದರು. ಮಹಿಳೆಯರ ಬಸ್ ಪ್ರಯಾಣ ಉಚಿತ ಮಾಡಿದ್ದೀರಿ, ಈಗ ಅಟೋ, ಟ್ಯಾಕ್ಸಿ ಚಾಲಕರಿಗೆ ಭತ್ಯೆ ಕೊಡಬೇಕು. ಸುಳ್ಳು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದಿದ್ದೀರಿ ಅವುಗಳನ್ನು ಪೂರೈಸುವ ಕೆಲಸ ಮಾಡಿ ಎಂದು ಹೇಳಿದರು.
ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿ, ಯಾವುದೇ ಒಂದು ಯೋಜನೆ ಜಾರಿ ಮಾಡಬೇಕೆಂದರೆ ಪೂರ್ವಾಪರ ವಿಚಾರ ಮಾಡಿ ಅದರ ಖರ್ಚು-ವೆಚ್ಚಗಳನ್ನು ಪರಿಶೀಲಿಸಿ ಹಣಕಾಸು ಸ್ಥಿತಿಗಳನ್ನು ನೋಡಿಕೊಂಡು ಜಾರಿಗೊಳಿಸಬೇಕು ಅದನ್ನು ಗಮನಿಸದೇ ಏಕಾಏಕಿ ಜಾರಿಗೊಳಿಸಿದರೆ ರಾಜ್ಯವು ಆರ್ಥಿಕ ಸ್ಥಿತಿಯಿಂದ ಬಳಲುವಂತಾಗುತ್ತದೆ ಎಂದು ಹೇಳಿದರು.
ಮೆರವಣಿಗೆ: ಮುಂಜಾನೆ 10ಗಂಟೆಗೆ ಹರದೊಳ್ಳಿಯ ಶ್ರೀ ಮಾರುತೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಾದ ಭಂಡಾರಿ ಕಾಲೇಜ್ ಕ್ರಾಸ್, ಪವಾರ ಕ್ರಾಸ್, ಪುರಸಭೆ ಮೂಲಕ ಚೌಬಜಾರ, ಕಂಠಿಪೇಟೆ, ಸರಾಫ್ ಬಜಾರ ಮೂಲಕ ಹೆಸ್ಕಾಂ ಕಚೇರಿಗೆ ತಲುಪಿ ಅಲ್ಲಿ ವೇದಿಕೆ ನಿರ್ಮಿಸಿ ಸಾಯಂಕಾಲದವರೆಗೆ ಪ್ರತಿಭಟಿನೆ ನಡೆಸಿದರು. ನಂತರ 4ಗಂಟೆಗೆ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ನೀಡಿದರು. ಮೆರವಣಿಗೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು.
ಬಾದಾಮಿ ತಾಲೂಕ ಭಾಜಪ ಮಂಡಲ ಅಧ್ಯಕ್ಷ ಶಿವನಗೌಡ ಸುಂಕದ, ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷೆ ಭಾಗ್ಯ ಉದ್ನೂರ, ರಂಗಪ್ಪ ಶೇಬಿನಕಟ್ಟಿ ಮಾತನಾಡಿದರು. ತಾಲ್ಲೂಕಿನ ವಿವಿಧ ಗ್ರಾಮಗಳ ಪಕ್ಷದ ಮುಖಂಡರು, ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಅಂಗಡಿ ಮುಗ್ಗಟ್ಟು ಬಂದ್: ಪಟ್ಟಣದಲ್ಲಿ ವ್ಯಾಪಾರಸ್ಥರು, ಸ್ವಯಂ ಪ್ರೇರಿತವಾಗಿ ಕೆಲವರು ಬಂದ್ ಮಾಡಿದ್ದರು ಇನ್ನು ಕೆಲವು ಅಂಗಡಿಗಳು ತೆರೆದಿದ್ದವು, ಬಿಜೆಪಿ ಕಾರ್ಯಕರ್ತರು ಅವುಗಳನ್ನು ಒತ್ತಾಯದ ಮೆರೆಗೆ ಬಂದ್ ಮಾಡಿಸಿದ್ದರು. ಟಂಟಂ ಮಾಲಕರು, ನೇಕಾರರು ಬೆಂಬಲ ವ್ಯಕ್ತಪಡಿಸಿದ್ದರು. ಪಟ್ಟಣದ ಪೊಲೀಸ್ ಇಲಾಖೆಯವರು ಪ್ರತಿಭನೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ ಒದಗಿಸಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಸಂಪತ್‍ಕುಮಾರ ರಾಠಿ, ಮುರುಗೇಶ ರಾಜನಾಳ, ಗಣೇಶ ಶೀಲವಂತ, ದೀಪಕ ನೇಮದಿ, ಸಂಜು ಕಾರಕೂನ, ಭಾಜಪ ನಗರ ಘಟಕದ ಅಧ್ಯಕ್ಷ ವಸಂತಸಾ ಧೋಂಗಡೆ, ಯುವ ಮುಖಂಡ ರಾಜು ಚಿತ್ತರಗಿ, ಪುರಸಭೆ ಮಾಜಿ ನಾಮ ನಿರ್ದೇಶನ ಸದಸ್ಯ ಬಸವರಾಜ ಬನ್ನಿ, ಶಿವಾನಂದ ಎಣ್ಣಿ, ಪುರಸಭೆ ಸದಸ್ಯ ಪ್ರಶಾಂತ ಜವಳಿ, ತಾಪಂ ಮಾಜಿ ಉಪಾಧ್ಯಕ್ಷ ಯಮನಪ್ಪ ವಡ್ಡರ, ಶ್ರೀಕಾಂತ ಭಾವಿ, ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಮಕೃಷ್ಣ ಮಿಣಜಗಿ, ಸೀತಲ್ ಸತ್ತೀಗೇರಿ, ಸಂಗಮೇಶ ತಿಪ್ಪಾ, ಪರಶುರಾಮ ಧನ್ನೂರ, ಸಂಗಪ್ಪ ಚಟ್ಟೇರ, ಶಿವಾನಂದ ಸತ್ತೀಗೇರಿ, ಹನಮಂತ ಕಲಾಲ, ರಾಜು ಗೌಡರ, ಮುತ್ತು ಚಿಕ್ಕನರಗುಂದ ಮುಂತಾದವರಿದ್ದರು.