ವಿದ್ಯುತ್ ದರ ಏರಿಕೆ: ಬಂದ್‍ಗೆ ಉ.ಕ.ದಲ್ಲಿ ಉತ್ತಮ ಪ್ರತಿಕ್ರಿಯೆ

ಹುಬ್ಬಳ್ಳಿ, ಜೂ22: ವಿದ್ಯುತ್ ದರ ಏರಿಕೆ ಕ್ರಮ ಖಂಡಿಸಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಇಂದು ಕರೆ ನೀಡಿದ ಕರ್ನಾಟಕ ಬಂದ್‍ಗೆ ಉತ್ತರ ಕರ್ನಾಟಕದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವಾರು ಸಂಘ ಸಂಸ್ಥೆಗಳು ಬಂದ್‍ಗೆ ಬೆಂಬಲ ಸೂಚಿಸಿದವು.

ಧಾರವಾಡ, ಬೆಳಗಾವಿ, ಹಾವೇರಿ, ಬಾಗಲಕೋಟ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಂದ್‍ಗೆ ಬೆಂಬಲ ವ್ಯಕ್ತವಾಯಿತು.

ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ವ್ಯಾಪಾರ ಮಳಿಗೆಗಳು, ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ವಾಣಿಜ್ಯ ನಗರಿ ಹುಬ್ಬಳ್ಳಿಯ ಹೃದಯಭಾಗವಾದ ಕಿತ್ತೂರ ಚನ್ನಮ್ಮ ವೃತ್ತ ಸೇರಿದಂತೆ ದುರ್ಗದಬೈಲ್, ಜನತಾ ಬಜಾರ್, ಜವಳಿ ಸಾಲ್, ದಾಜಿಬಾನ ಪೇಟ್ ಹಾಗೂ ಪ್ರಮುಖ ಮಾರುಕಟ್ಟೆ ಪ್ರದೇಶÀಗಳಲ್ಲಿ ಅಂಗಡಿಗಳನ್ನು ಮುಚ್ಚಲಾಗಿತ್ತು. ಆದರೆ ಸಾರಿಗೆ ಬಸ್‍ಗಳ, ಇನ್ನಿತರ ವಾಹನಗಳ ಓಡಾಟ ಎಂದಿನಂತೆ ಇತ್ತು.

ನಗರದ ನೆಹರೂ ಮೈದಾನದ ಬಳಿ ಇರುವ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಿಂದ ಮುಂಜಾನೆ ಆರಂಭವಾದ ಪ್ರತಿಭಟನಾ ರ್ಯಾಲಿ ಜೆ.ಸಿ. ನಗರ, ಕೊಪ್ಪಿಕರ ರಸ್ತೆ, ಚನ್ನಮ್ಮ ವೃತ್ತ ಮೂಲಕ ತಹಶೀಲ್ದಾರ ಕಚೇರಿ ತಲುಪಿ ತಹಶಿಲ್ದಾರ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನಾಕಾರರು ಕೈಯಲ್ಲಿ ಪುಟ್ಟ ಲಾಂದ್ರಗಳನ್ನು ಪ್ರದರ್ಶಿಸಿದುದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ಧುರೀಣರು ಏಕಾಏಕಿ ವಿದ್ಯುತ್ ದರ ಏರಿಕೆಯು ಗಧಾಪ್ರಹಾರ ನಡೆಸಿದಂತಾಗಿದ್ದು ಕೂಡಲೇ ಇದನ್ನು ಕೈಬಿಡಬೇಕೆಂದು ಆಗ್ರಹಿಸಿದರು.

ಧಾರವಾಡ ಜಿಲ್ಲಾ ಜವಳಿ ಮತ್ತು ಕ್ಲಾಥ್ ಮರ್ಚಂಟ್ಸ್ ಅಸೋಸಿಯೇಶನ್, ಜ್ಯುವೆಲರ್ಸ್ ಅಸೋಸಿಯೇಶನ್, ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಶನ್, ಟ್ರಾನ್ಸಪೋರ್ಟ್ ಅಸೋಸಿಯೇಶನ್, ಎಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಅಸೋಸಿಯೇಶನ್, ಹೊಟೇಲ್ ಅಸೋಸಿಯೇಶನ್, ದಲಾಲ ಮತ್ತು ವ್ಯಾಪಾರಸ್ಥರ ಸಂಘ ಸೇರಿದಂತೆ ಹಲವಾರು ಸಂಘಟನೆಗಳು ಬಂದ್‍ಗೆ ಬೆಂಬಲ ನೀಡಿದವು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ, ಪ್ರಧಾನ ಕಾರ್ಯದರ್ಶಿ ಪ್ರವೇಣ್ ಅಗಡಿ ಸೇರಿದಂತೆ ನೂರಾರು ಉದ್ಯಮಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಧಾರವಾಡದಲ್ಲೂ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಟ್ಟೆ ಅಂಗಡಿ, ಕಿರಾಣಿ, ಸ್ಟೇಷನರಿಗಳು ಸೇರಿದಂತೆ ವ್ಯಾಪಾರ ವಹಿವಾಟು ಬಂದ್ ಮಾಡಲಾಯಿತು. ಕೆಸಿಸಿ ಬ್ಯಾಂಕ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು. ನಗರದ ಹೃದಯ ಭಾಗವಾದ ಸೂಪರ್ ಮಾರ್ಕೆಟ್ ಹಾಗೂ ಸುಭಾಸ್ ರಸ್ತೆಯಲ್ಲೂ ಅಂಗಡಿಗಳನ್ನು ಮುಚ್ಚಲಾಗಿತ್ತು.

ಆಗ್ರಹ: ವಿದ್ಯುತ್ ದರ ಹೆಚ್ಚಳ ಅವೈಜ್ಞಾನಿಕವಾಗಿದ್ದು ಕೂಡಲೇ ಈ ನಿರ್ಧಾರ ವಾಪಸ್ ಪಡೆಯುವಂತೆ ಹುಬ್ಬಳ್ಳಿ ವಕೀಲರ ಸಂಘ ಆಗ್ರಹಿಸಿದೆ ಎಂದು ಸಂಘದ ಅಧ್ಯಕ್ಷರಾದ ಸಿ.ಆರ್. ಪಾಟೀಲ ತಿಳಿಸಿದ್ದಾರೆ.

ಕುಂದಾನಗರಿ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಬೆಳಿಗ್ಗೆ ನೂರಾರು ಸಂಖ್ಯೆಯಲ್ಲಿ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದರು. ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಹೆಗಲ ಮೇಲೆ ಹೊತ್ತುಕೊಂಡು ಅಣಕು ಶವಯಾತ್ರೆಯನ್ನು ಮಾಡಲಾಯಿತು.

ಸರ್ಕಾರ ವಿದ್ಯುತ್ ದರವನ್ನು ಏರಿಸಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೆ ದರವನ್ನು ಇಳಿಸಬೇಕು ಎಂದು ತಮ್ಮ ಆಕ್ರೊಶವನ್ನು ಪ್ರತಿಭಟನಾಕಾರರು ಹೊರಹಾಕಿದರು.