ವಿದ್ಯುತ್ ದರ ಏರಿಕೆ ಖಂಡಿಸಿ, ವರ್ತಕರಿಂದ ಪ್ರತಿಭಟನೆ


ಸಂಜೆವಾಣಿ ವಾರ್ತೆ
ಹೊಸಪೇಟೆ, ಜೂ.23: ವಿದ್ಯುತ್ ದರ ಏರಿಕೆ ಖಂಡಿಸಿ, ವಾಣಿಜ್ಯೋದ್ಯಮ ಹಾಗು ಕೈಗಾರಿಕಾ ಸಂಘದ ನೇತೃತ್ವದಲ್ಲಿ ನಗರದ ವಿವಿಧ ಸಂಘಟನೆಗಳು ಕರೆ ನೀಡಿದ್ದ ಹೊಸಪೇಟೆ ಬಂದ್‍ಗೆ ಗುರುವಾರ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಆಸ್ಪತ್ರೆ, ಔಷಧಿ ಸೇರಿದಂತೆ ತುರ್ತು ಸೇವೆಗಳನ್ನು ಹೊರತು ಪಡಿಸಿ, ಉಳಿದ ಅಂಗಡಿ-ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿಕೊಂಡ ನಗರದ ವರ್ತಕರು, ಹೊಸಪೇಟೆ ಬಂದ್‍ಗೆ ಬೆಂಬಲ ಸೂಚಿಸಿದರು.
@12bc = ಬೈಕ್ ಱ್ಯಾಲಿ:
ನಗರದ ವಡಕರಾಯ ದೇವಸ್ಥಾನದಿಂದ ಮೇನ್ ಬಜಾರ್, ಪುಣ್ಯಮೂರ್ತಿ ವೃತ್ತ, ಬಸ್ ನಿಲ್ದಾಣ, ಡಾ.ಪುನೀತ್ ರಾಜಕುಮಾರ್ ವೃತ್ತ, ಮದಕರಿ ನಾಯಕ ವೃತ್ತ, ವಾಲ್ಮೀಕಿ ವೃತ್ತ, ಚೆಕ್‍ಪೋಸ್ಟ್ ಮೂಲಕ ಸಾಯಿಬಾಬಾ ವೃತ್ತದ ವರೆಗೆ ಬೈಕ್ ರ್ಯಾಲಿ ನಡೆಸಿ, ದಾರಿಯುದಕ್ಕೂ ರಾಜ್ಯ ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿದರು. ಬಳಿಕ ಅಲ್ಲಿಂದ ಕಾಲ್ನಡಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಅವರಿಗೆ ಮನವಿ ಸಲ್ಲಿಸಿದರು.
 ಒತ್ತಾಯ
ವಿದ್ಯುತ್ ದರ ಏರಿಕೆಯಿಂದ ಕೈಗಾರಿಕೋದ್ಯಮದ ಮೇಲೆ ಭಾರಿ ಪೆಟ್ಟು ಬಿದ್ದಿದೆ. ಆರ್ಥಿಕ ಶಕ್ತಿ ಕುಂದಲಿದ್ದು, ವ್ಯವಹಾರಕ್ಕೆ ಪೆಟ್ಟು ಬೀಳಲಿದೆ. ಈಗ ಗೃಹ ಹಾಗು ವಾಣಿಜ್ಯ ಉದ್ದೇಶದ ವಿದ್ಯುತ್ ಬಿಲ್‍ನಲ್ಲಿ ಭಾರಿ ಏರಿಕೆ ಮಾಡಲಾಗಿದೆ. ಬರೀ ಎರಡು ಸ್ಲಾಬ್‍ಗಳನ್ನು ಮಾತ್ರ ಮಾಡಲಾಗಿದೆ. ಈ ಹಿಂದಿನ ವಿದ್ಯುತ್ ಬಿಲ್‍ನಂತೇ ಕರೆಂಟ್ ಬಿಲ್ ಪಾವತಿಗೆ ಅವಕಾಶ ಮಾಡಿಕೊಡಬೇಕು. ಕೆಇಆರ್‍ಸಿ ಅವೈಜ್ಞಾನಿಕ ಮಾದರಿಯಲ್ಲಿ ಕರೆಂಟ್ ಬಿಲ್ ಏರಿಕೆ ಮಾಡಿದೆ. ಆಗಿರುವ ಅನ್ಯಾಯವನ್ನು ಸರ್ಕಾರ ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ವಿಜಯನಗರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಜಿಲ್ಲಾಧ್ಯಕ್ಷ ಅಶ್ವಿನ್ ಕೊತ್ತಂಬರಿ ಕಾರ್ಯದರ್ಶಿ ಕಾಕುಬಾಳ ರಾಜೇಂದ್ರ, ಜಂಟಿ ಕಾರ್ಯದರ್ಶಿ ಪ್ರಲ್ಹಾದ್ ಭೂಪಳ, ಮುಖಂಡರಾದ ಮಹೇಂದ್ರಕುಮಾರ ಜೈನ್, ಮಧುಕರರಾವ್, ಸೈಯದ್ ನಾಜಿಮುದ್ದಿನ್, ಶ್ರೀಪಾದ, ರಾಜೇಶ್ ಕೋರಿಶೆಟ್ಟಿ ಸುದೀಪ್ ಕೊಯ್ಲಿ, ರಮೇಶ್ ಗುಪ್ತಾ, ಮಂಜುನಾಥ ಕೆ.ಎಂ. ಮತ್ತು ಕಿರಾಣಿ ವರ್ತಕರ ಸಂಘ, ರೆಡಿಮೇಡ್ ಮತ್ತು ಓಲ್‍ಸೇಲ್ ಬಟ್ಟೆ  ವ್ಯಾಪಾರಿಗಳ ಸಂಘ, ಡಿಸ್ಟಿಬೂಟರ್ಸ್ ಅಸೋಶಿಯೇಷನ್, ಜುವೆಲರಿ ಅಸೋಶಿಯೇಷನ್, ಹೋಟೆಲ್ ಮಾಲೀಕರ ಸಂಘ ಸೇರಿದಂತೆ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳು ಸೇರಿದಂತೆ ವಿವಿಧ ಸಂಘಟನೆಗಳು 1500 ಕ್ಕೂ ಹೆಚ್ಚು ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

One attachment • Scanned by Gmail