ವಿದ್ಯುತ್ ದರ ಏರಿಕೆ ಖಂಡಿಸಿ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ

ಮೈಸೂರು, ನ.19: ವಿದ್ಯುತ್ ದರ ಏರಿಕೆ ಖಂಡಿಸಿ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಇಂದಿರಾ ಗಾಂಧಿ ಜಯಂತಿಯಂದು ರಾಷ್ಟ್ರೀಯ ಐಕ್ಯತಾ ದಿನದಂದು ಕಾಂಗ್ರೆಸ್ ಕಛೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಮಾತನಾಡಿ ಸುಮಾರು ಒಂದು ವರ್ಷದಿಂದ ಕೊರೋನಾ ಮಹಾಮಾರಿಯ ಹೊಡೆತಕ್ಕೆ ಸಿಲುಕಿ ಇಡೀ ದೇಶವೇ ತಲ್ಲಣಗೊಂಡಿದೆ. ತೀವ್ರ ಆರ್ಥಿಕ ಕುಸಿತ, ವ್ಯಾಪಾರ, ನಿರುದ್ಯೋಗ, ರೈತರ ಬವಣೆ, ಮುಚ್ಚುತ್ತಿರುವ ಸಣ್ಣ ಕೈಗಾರಿಕೆಗಳು, ದುಡಿಮೆ ಇಲ್ಲದೆ, ಕೈಲಿ ಕಾಸಿಲ್ಲದೆ ಕಂಗಾಲಾಗಿರುವ ಜನತೆ ಹಾಗೂ ರಾಜ್ಯದಾದ್ಯಂತ ಹತಾಶೆ ಮನೆ ಮಾಡಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಜನರ ಜೊತೆ ಸಹಾನುಭೂತಿಯಿಂದ ವರ್ತಿಸಬೇಕೆನ್ನುವುದು ರಾಜಧರ್ಮದ ಆಶಯವಾಗಿರುತ್ತದೆ. ವಿಷಯ ಪರಿಸ್ಥಿತಿಗಳಲ್ಲಿ ಸರ್ಕಾರದ ನಿಯಂತ್ರಣದಲ್ಲಿರುವ ಸೇವೆಯಲ್ಲಿ ಜನರಿಗೆ ರಿಯಾಯಿತಿಯನ್ನು ನೀಡುವುದು ಜನಪರ ಸರ್ಕಾರದ ಆದ್ಯತೆಯಾಗಿರುತ್ತದೆ. ಆದರೆ ವಿಪರ್ಯಾಸವೆಂದರೆ ರಿಯಾಯಿತಿ ನೀಡಬೇಕಾದ ಸರ್ಕಾರವೇ ಈಗ ವಿದ್ಯುತ್ ದರವನ್ನು ದುಬಾರಿಯನ್ನಾಗಿ ಮಾಡಿದೆ. ಕರ್ನಾಟಕದ ಜನರಿಗೆ ರಾಜ್ಯೋತ್ಸವದ ಕೊಡುಗೆಯಾಗಿ ನ.1ರಿಂದ ವಿದ್ಯುತ್ ದರವನ್ನು ಪರಿಷ್ಕರಿಸಿ ಸರಾಸರಿ ಶೇ.5.4ರಂತೆ ಅಂದರೆ ಯೂನಿಟ್ ಗೆ 40ಪೈಸೆಯಂತೆ ಹೆಚ್ಚಳ ಮಾಡಿ ಆದೇಶವನ್ನು ಹೊರಡಿಸಿದೆ.
ರಾಜ್ಯದ ಜನರು ಕಾಣದಂತಹ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಹತಾಶರಾಗಿರುವ ಸಂದರ್ಭದಲ್ಲಿ ಜನರ ದಿನನಿತ್ಯದ ಬದುಕಿಗೆ ಅನಿವಾರ್ಯವಾಗಿರುವ ವಿದ್ಯುತ್ ದರವನ್ನು ಏರಿಸಿರುವ ಕ್ರಮವು ಅಕ್ಷಮ್ಯ. ಅಧರ್ಮ, ಜನವಿರೋಧಿ ಮತ್ತು ಅಮಾನವೀಯ. ಇದು ಕರ್ನಾಟಕದ ಜನರ ಜೀವನದ ಮೇಲೆ ನಡೆಸಿದ ಕ್ಚರೂರ ಪ್ರಹಾರ, ಇದರಿಂದಾಗಿ ಸಮಾಜದ ವಿವಿಧ ವರ್ಗಗಳ ಮೇಲೆ ದುಷ್ಪರಿಣಾಮ ಬೀರಲಿದೆ. ಇಂತಹ ವಿಷಮ ಸ್ಥಿತಿಗಳಲ್ಲಿ ವಿದ್ಯುತ್ ದರ ಏರಿಕೆಯ ಕಠೋರವಾದ ಜನವಿರೋಧಿ ಕೃತ್ಯಕ್ಕೆ ಸರ್ಕಾರ ಮುಂದಾಗಿರುವಾಗ ಅದನ್ನು ಸಹಿಸಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ವಿದ್ಯುತ್ ದರ ಏರಿಕೆ ಅನ್ಯಾಯ ಹಾಗೂ ಅಮಾನವೀಯ. ಯಾವುದೇ ರೀತಿಯಲ್ಲಿಯೂ ಸಮರ್ಥನೀಯವಲ್ಲ. ವಿದ್ಯುತ್ ದರ ಏರಿಕೆಯನ್ನು ತಕ್ಷಣದಿಂದಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಬಾರಿಯೂ ವಿದ್ಯುತ್ ದರ ಹೆಚ್ಚಳಮಾಡುವ ಮೊದಲು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕೆಇಆರ್ ಸಿ ಇವರು ಜನರ ಅಭಿಪ್ರಾಯವನ್ನು ಸಂಗ್ರಹಿಸಿ ಜನರಿಗೆ ಹೊರೆಯಾಗದ ರೀತಿಯಲ್ಲಿ 10ಪೈಸೆಯಿಂದ 15ಪೈಸೆಯವರೆಗೆ ಹೆಚ್ಚಳ ಮಾಡುತ್ತಿದ್ದರು. ಆದರೆ ಈ ಬಾರಿ ಕೋವಿಡ್ ಇದ್ದುದರಿಂದ ಕಳೆದ 7ತಿಂಗಳಿನಿಂದ ಜನರ ಅಭಿಪ್ರಾಯ ಪಡೆದಿಲ್ಲ. ಜನರ ಅಭಿಪ್ರಾಯವನ್ನು ತೆಗೆದುಕೊಳ್ಳುವುದನ್ನು ಬಿಟ್ಟು ಸರ್ವಾಧಿಕಾರಿಯಂತೆ ಯೂನಿಟ್ ಗೆ 40ಪೈಸೆ ಹೆಚ್ಚಳ ಮಾಡಿರುವುದು ಜನಸಾಮಾನ್ಯರಿಗೆ ಮಾಡಿದ ದ್ರೋಹ ಎಂದು ಕಿಡಿಕಾರಿದರು. ಕೂಡಲೇ ಹಿಂಪಡೆಯದಿದ್ದಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.