ವಿದ್ಯುತ್ ದರ ಏರಿಕೆ ಅಮಾನವೀಯ: ಎಸ್.ಯು.ಸಿ.ಐ

ಕಲಬುರಗಿ,ಜೂ.10- ರಾಜ್ಯ ಸರ್ಕಾರದ ವಿದ್ಯುತ್ ದರ ಏರಿಕೆ ಮಾಡಿರುವುದನ್ನು ಎಸ್.ಯು.ಸಿ.ಐ (ಸಿ) ಪಕ್ಷ ತೀವ್ರವಾಗಿ ಖಂಡಿಸಿದ್ದು, ಕೂಡಲೇ ದರ ಏರಿಕೆಯನ್ನು ಹಿಂತೆಗೆದುಕೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿದೆ.
ಕೋವಿಡ ಸಂಕಷ್ಟದಲ್ಲಿರುವ ಜನಸಾಮಾನ್ಯರ ಮೇಲೆ ಹೊರೆಹಾಕಲು ರಾಜ್ಯದಲ್ಲಿ ಏಪ್ರಿಲ್ 1 ರಿಂದಲೇ ಜಾರಿಗೆ ಬರುವಂತೆ ವಿದ್ಯುತ್ ದರ ಏರಿಕೆ ಮಾಡಿರುವ ತೀರ್ಮಾನ ಅಮಾನವೀಯದಿಂದ ಕೂಡಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಹೆಚ್. ವ್ಹಿ. ದಿವಾಕರ್ ಪ್ರತಿಕ್ರಿಯಿಸಿದ್ದಾರೆ.
ಪ್ರತಿ ಯೂನಿಟ್ ಗೆ ಸರಾಸರಿ 30 ಪೈಸೆಯಂತೆ ಏರಿಕೆ ಮಾಡಲಾಗಿದೆ. ಜೊತೆಗೆ ನಿಗದಿತ ಠೇವಣಿ ಮೊತ್ತವನ್ನೂ ಏರಿಕೆ ಮಾಡಲಾಗಿದೆ. ಈಗಾಗಲೇ ಕೋವಿಡ್ ಲಾಕ್ ಡೌನ್ ಕಾರಣಕ್ಕೆ ತಮ್ಮ ಉದ್ಯೋಗ, ಆದಾಯ ಕಳೆದುಕೊಂಡಿರುವ ಜನರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಬೇರೆ ಕೆಲವು ರಾಜ್ಯಗಳಲ್ಲಿ ವಿದ್ಯುತ್, ನೀರಿನ ಶುಲ್ಕಗಳ ಪಾವತಿಯನ್ನು ರದ್ದುಗೊಳಿಸಿದ ಅಥವಾ ಮುಂದೂಡಿದ ನಿದರ್ಶನಗಳಿರುವಾಗ, ನಮ್ಮ ರಾಜ್ಯದಲ್ಲಿ ಪೂರ್ವಾನ್ವಯವಾಗುವಂತೆ ದರ ಏರಿಕೆ ಮಾಡಿರುವುದು ಖಂಡನೀಯ.
ನಷ್ಟ ಸರಿದೂಗಿಸಲು ಸೋರಿಕೆ, ಭ್ರಷ್ಟಾಚಾರ, ದುಂದುವೆಚ್ಚಗಳನ್ನು ತಡೆಗಟ್ಟುವ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು. ಕೋವಿಡ್ ಪರಿಹಾರದ ಹೆಸರಿನಲ್ಲಿ ಒಂದು ಕೈಯಲ್ಲಿ ಪುಡಿಗಾಸನ್ನು ನೀಡಿ ಇನ್ನೊಂದು ಕೈಯಲ್ಲಿ ಈ ರೀತಿ ವಿದ್ಯುತ್, ಪೆಟ್ರೋಲ್ ಗಳ ಮೂಲಕ ಸುಲಿಗೆ ಮಾಡುವುದು ಜನಪರ ಸರ್ಕಾರದ ಲಕ್ಷಣವೇ?
ವಿದ್ಯುತ್ ರಂಗವು ಸರ್ಕಾರದ ವ್ಯಾಪ್ತಿಯಲ್ಲಿರುವಾಗಲೇ ಇಂತಹ ಪರಿಸ್ಥಿತಿ ಇರುವಾಗ, ಖಾಸಗೀಕರಣಗೊಂಡಲ್ಲಿ ಎಷ್ಟು ನಿರ್ದಯಿಯಾಗಬಹುದು ಎಂಬುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು.
ದೆಹಲಿಯಲ್ಲಿ ಕಳೆದ 6 ತಿಂಗಳುಗಳಿಂದ ರೈತರು ನಡೆಸುತ್ತಿರುವ ಹೋರಾಟದ ಬೇಡಿಕೆಗಳಲ್ಲಿ ವಿದ್ಯುತ್ ಖಾಸಗೀಕರಣವನ್ನು ಕೈಬಿಡಬೇಕು ಎಂಬುದೂ ಒಂದಾಗಿದ್ದು, ಜನತೆ ಈ ಹೋರಾಟವನ್ನು ಬಲಪಡಿಸಬೇಕಾಗಿದೆ
ವಿದ್ಯುತ್ ದರ ಏರಿಕೆಯ ಈ ಜನವಿರೋಧಿ ತೀರ್ಮಾನವನ್ನು ಸರ್ಕಾರ ತಕ್ಷಣವೇ ಕೈಬಿಡಬೇಕು ಮತ್ತು ಇದಕ್ಕಾಗಿ ಒತ್ತಾಯಿಸಿ ಜನತೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.