ವಿದ್ಯುತ್ ದರ ಏರಿಕೆಗೆ ಖಂಡನೆ

ತುಮಕೂರು, ನ. ೧೧- ಕೋವಿಡ್-೧೯ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ಬರಬೇಕಾದ ಬಿಜೆಪಿ ಸರ್ಕಾರ ವಿದ್ಯುತ್ ದರ ಏರಿಸಿರುವುದು ಖಂಡನೀಯ. ಕೂಡಲೇ ಸರ್ಕಾರ ತನ್ನ ತೀರ್ಮಾನದಿಂದ ಹಿಂದೆ ಸರಿಯಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ತಾಜುದ್ದೀನ್ ಶರೀಫ್ ಒತ್ತಾಯಿಸಿದ್ದಾರೆ.
ಕೊರೊನಾ ಸೋಂಕಿನಿಂದ ಲಾಕ್‌ಡೌನ್ ಮಾಡಿ ಜನರಿಗೆ ಕೆಲಸವೇ ಇಲ್ಲದಂತೆ ಆಗಿದೆ. ಪರಿಣಾಮ ಕೈಯಲ್ಲಿ ಕಾಸಿಲ್ಲದೆ ಜನರು ಪರದಾಡುತ್ತಿದ್ದಾರೆ. ಕಾರ್ಮಿಕರಿಗೆ ಉದ್ಯೋಗದ ಭದ್ರತೆ ಇಲ್ಲ. ವೇತವನ್ನೂ ಕಡಿತ ಮಾಡಲಾಗಿದೆ. ರೈತರು ಬೆಳೆದ ಬೆಳೆಯೂ ಕೈಗೆ ಬಂದಿಲ್ಲ. ಕೃಷಿ ಉತ್ಪಾದನೆಗೆ ಬೆಂಬಲ ಬೆಲೆಯೂ ಸಿಗುತ್ತಿಲ್ಲ. ನಷ್ಟದ ಮೇಲೆ ನಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲೇ ವಿದ್ಯುತ್ ಕಂಪನಿಗಳು ದರ ಏರಿಕೆ ಮಾಡಿ ಜನರ ಲೂಟಿಗೆ ಇಳಿದಿವೆ ಎಂದು ದೂರಿದರು.
ಎಲ್ಲ ವರ್ಗದವರಿಗೂ ಯೂನಿಟ್‌ಗೆ ೪೦ ಪೈಸೆ ಹೆಚ್ಚಿಗೆ ಮಾಡಿ ಸರ್ಕಾರ ಜನರ ಮೇಲೆ ಹೊರೆ ಹೊರಿಸಿದೆ. ಬಡವರು, ನೊಂದವರು ಜನಸಾಮಾನ್ಯರ ನೆರವಿಗೆ ನಿಲ್ಲಬೇಕಿದ್ದ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಜನಸಾಮಾನ್ಯರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಸರ್ಕಾರ ಸೋತು ಹೋಗಿದೆ ಎಂದು ಆರೋಪಿಸಿದರು.
ದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಗ್ರಾಹಕರನ್ನು ಕಿತ್ತು ತಿನ್ನುತ್ತಿವೆ. ದೊಡ್ಡ ಉದ್ಯಮಿಗಳ ಕೋಟ್ಯಂತರ ರೂಪಾಯಿ ಸಾಲವನ್ನು ಮನ್ನಾ ಮಾಡಲಾಗಿದೆ. ವಸೂಲಿ ಮಾಡಲು ಸಾಧ್ಯವಾಗದೆ ಹಿಂದಿರುಗಿ ಬಾರದ ಹಣ ಎಂದು ಕೇಂದ್ರ ಸರ್ಕಾರ ಕೈಕಟ್ಟಿ ಕುಳಿತಿದೆ. ಆದರೆ ಸಾಮಾನ್ಯ ಗ್ರಾಹಕರ ಮೇಲೆ ಬರೆ ಎಳೆಯುತ್ತಲೇ ಬರುತ್ತಿದೆ ಎಂದು ಟೀಕಿಸಿದರು.
ಖಾತೆಯಿಂದ ಹಣ ಹಿಂತೆಗೆಯಲು, ಜಮಾ ಮಾಡಲು ಮತ್ತು ಚೆಕ್ ಪುಸ್ತಕ ಪಡೆಯುವುದು ಸೇರಿ ಎಲ್ಲ ಸೇವೆಗಳಿಗೆ ಮನಬಂದಂತೆ ಶುಲ್ಕ ವಿಧಿಸುತ್ತಿವೆ. ಬ್ಯಾಂಕ್‌ಗಳ ಮೇಲೆ ಯಾರ ಹಿಡಿತವೂ ಇಲ್ಲ. ಒಂದೊಂದು ಬ್ಯಾಂಕ್ ಒಂದೊಂದು ರೀತಿಯಲ್ಲಿ ಶುಲ್ಕ ವಸೂಲಿ ಮಾಡುತ್ತಿದೆ. ಗ್ರಾಹಕರ ಗಮನಕ್ಕೆ ಬಾರದೆ ಹಣ ಕಡಿತ ಮಾಡಿಕೊಳ್ಳುತ್ತಿರುವುದನ್ನು ನಿಲ್ಲಿಸಬೇಕು ಎಂದು ತಾಜುದ್ದೀನ್ ಶರೀಫ್ ಆಗ್ರಹಿಸಿದರು.