ವಿದ್ಯುತ್ ದರ ಏರಿಕೆಗೆ ಖಂಡನೆ; ಎನ್ ಎಸ್ ಯುಐ ಪ್ರತಿಭಟನೆ


ಹೊನ್ನಾಳಿ.ನ.೨೨; ಕೊರೊನಾ ಸಂಕಷ್ಟದ ಮಧ್ಯೆಯೇ ಸರಕಾರ ವಿದ್ಯುತ್ ದರ ಹೆಚ್ಚಳ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಎನ್‌ಎಸ್‌ಯುಐ ರಾಜ್ಯ ಕಾರ್ಯದರ್ಶಿ ದರ್ಶನ್ ಬಳ್ಳೇಶ್ವರ ಹೇಳಿದರು.
ವಿದ್ಯುತ್ ದರ ಹೆಚ್ಚಳ ಖಂಡಿಸಿ ಎನ್‌ಎಸ್‌ಯುಐ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡ ಪ್ರತಿಭಟನೆ ವೇಳೆ ಅವರು ಮಾತನಾಡಿದರು.ಕೋವಿಡ್-೧೯ರ ಸಂದರ್ಭದಲ್ಲಿ ಜನರು ನಿರುದ್ಯೋಗದಿಂದ ಕಂಗಾಲಾಗಿದ್ದಾರೆ. ಬಡತನ, ಹಣಕಾಸಿನ ತೊಂದರೆ ಜನರನ್ನು ಬಾಧಿಸುತ್ತಿದೆ. ಕೆಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರು ಬೆಂಗಳೂರು ತೊರೆದು ತಮ್ಮ ಊರುಗಳನ್ನು ಸೇರಿದ್ದಾರೆ. ಆದಾಯ ಇಲ್ಲದೇ ಜನರು ಜೀವನ ನಡೆಸುವುದೇ ದುಸ್ತರವಾಗಿದೆ. ಇಂಥ ಸಂದರ್ಭದಲ್ಲಿ ಶೇ.೨೫ರಷ್ಟು ವಿದ್ಯುತ್ ದರ ಹೆಚ್ಚಳ ಮಾಡಿರುವುದು ಸರಿಯಲ್ಲ. ತಕ್ಷಣ ಸರಕಾರ ದರ ಹೆಚ್ಚಳ ಹಿಂಪಡೆಯಬೇಕು ಎಂದು ಆಗ್ರಹಿಸಿದರು.ಸರಕಾರ ಕೂಡಲೇ ವಿದ್ಯುತ್ ದರ ಹೆಚ್ಚಳ ಹಿಂಪಡೆಯಬೇಕು. ಇಲ್ಲದಿದ್ದರೆ, ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಎನ್‌ಎಸ್‌ಯುಐ ತಾಲೂಕು ಅಧ್ಯಕ್ಷ ಮನೋಜ್ ವಾಲಜ್ಜಿ, ಮುಖಂಡರಾದ ಶ್ರೀಧರ್‌ಗೌಡ, ಸುಜಯ್, ಪ್ರದೀಪ್, ಸಂಜೀವ್ ಚಿಗರಿ, ಜಯರಾಮ್, ಕೌಶಿಕ್ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯುತ್ ದರ ಹೆಚ್ಚಳ ಹಿಂಪಡೆಯಲು ಆಗ್ರಹಿಸಿ ಹೊನ್ನಾಳಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ಇದಕ್ಕೂ ಮೊದಲು ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಾಲೂಕು ಕಚೇರಿವರೆಗೆ ಮೇಣದ ಬತ್ತಿ ಹಿಡಿದು ಮೆರವಣಿಗೆ ನಡೆಸಲಾಯಿತು.