ವಿದ್ಯುತ್ ದರ ಏರಿಕೆಗೆ ಕಾಂಗ್ರೆಸ್ ಖಂಡನೆ

ಮೈಸೂರು, ನ.17: ರಾಜ್ಯದಲ್ಲಿ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿರುವುದನ್ನು ಕಾಂಗ್ರೆಸ್ ಖಂಡಿಸಿದೆ. ಈ ಕುರಿತು ಸರ್ಕಾರದ ವಿರುದ್ಧ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಮೈಸೂರಿನ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಜನಗಳ ಅಭಿಪ್ರಾಯ ಸಂಗ್ರಹಿಸದೇ ಯೂನಿಟ್‍ಗೆ 40 ಪೈಸೆ ಜಾಸ್ತಿ ಮಾಡಿದ್ದಾರೆ. ಇದರಿಂದ ಪ್ರತಿ ಬಡ ಕುಟುಂಬಕ್ಕೆ 80 ರೂಪಾಯಿ ಹೊರೆಯಾಗುತ್ತದೆ. ಮೇಲ್ನೋಟಕ್ಕೆ ನವೆಂಬರ್ 1ರಿಂದ ಬಂದಿಲ್ಲ. ಏಪ್ರಿಲ್ ನಿಂದಲೇ ಜಾರಿಗೆ ಬಂದಿದೆ. ಸರ್ಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರದ ಅವೈಜ್ಞಾನಿಕ ನೀತಿಗಳಿಂದ ಈಗಾಗಲೇ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಆದರೂ ಕೇಂದ್ರ ಸರ್ಕಾರ ಬುದ್ದಿ ಕಲಿತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಎಲೆಕ್ಟ್ರಾನಿಕ್ ಮತ ಯಂತ್ರಗಳೆಲ್ಲ ಈಗ ಮೋದಿ ಮತಯಂತ್ರಗಳಾಗಿವೆ. ಇವಿಎಮ್ ಅಲ್ಲ ಅವು ಎಮ್ ವಿಎಮ್ ಆಗಿವೆ ಎಂದು ವ್ಯಂಗ್ಯವಾಡಿದರು.
ನಮಗೆ ಇವಿಎಂ ಗಳ ಮೇಲೆ ನಂಬಿಕೆ ಇಲ್ಲ. ಚುನಾವಣೆಗಳನ್ನು ನಡೆಸುವುದಾದರೆ ಬ್ಯಾಲಟ್ ಪೇಪರ್ ಗಳನ್ನು ಬಳಸಿ ಚುನಾವಣೆ ನಡೆಸಿ ಎಂದು ಚುನಾವಣೆ ಆಯೋಗಕ್ಕೆ ಲಕ್ಷ್ಮಣ್ ಮನವಿ ಮಾಡಿದರು.
ಬಿಹಾರದಲ್ಲಿ ಮಹಾಘಟಬಂಧನ್ ಹೆಚ್ಚಿನ ಸಂಖ್ಯೆಯಲ್ಲಿ ಸೀಟುಗಳನ್ನು ಗೆಲ್ಲುತ್ತವೆ ಎಂದು ಎಲ್ಲಾ ಸಮೀಕ್ಷೆಗಳು ವರದಿ ಮಾಡಿದ್ದವು. ಸಮೀಕ್ಷೆಗಳೆಲ್ಲಾ ಉಲ್ಟಾ ಹೊಡೆದಿದೆ ಅಂದರೇನರ್ಥ? ಬಿಜೆಪಿ ಇವಿಎಮ್ ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಹಾಗೆಯೇ ಶಿರಾ ಹಾಗೂ ಆರ್ ಆರ್ ನಗರದಲ್ಲಿ ಬಳಸಲಾದ ಇವಿಎಂ ಗಳನ್ನು ಯಾವ ರಾಜ್ಯದಿಂದ ತರಿಸಲಾಗಿತ್ತು ಎಂದು ಪ್ರಶ್ನಿಸಿದ ಅವರು ಇವಿಎಂ ನ್ನು ಬಿಜೆಪಿ ಅಧಿಕಾರ ನಡೆಸುವ ರಾಜ್ಯಗಳಿಂದ ತರಿಸಲಾಗಿತ್ತು. ಅಮೇರಿಕಾದಂತಹ ರಾಷ್ಟ್ರವೇ ಬ್ಯಾಲಟ್ ಪೇಪರ್ ಗಳ ಮೂಲಕ ಚುನಾವಣೆ ನಡೆಸುತ್ತದೆ. ನಾವು ಇವಿಎಮ್ ವಿರುದ್ಧವಾಗಿದ್ದೇವೆ, ಅದನ್ನು ಬ್ಯಾನ್ ಮಾಡಬೇಕು. ಮುಂದಿನ ದಿನಗಳಲ್ಲಿ ಇವಿಎಮ್ ವಿರುದ್ಧ ದೊಡ್ಡ ಜನಾಂದೋಲನವನ್ನೇ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.