
ಯಾದಗಿರಿ,ಮೇ.16-ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆ.ಇ.ಆರ್.ಸಿ) ಏಪ್ರಿಲ್ 01 ರಿಂದಲೇ ಜಾರಿಯಾಗುವಂತೆ ಪ್ರತಿ ಯುನಿಟ್ಗೆ 0.70 ಪೈಸೆ ದರ ಹೆಚ್ಚಿಸಿರುವುದನ್ನು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) (ಎಸ್‍ಯುಸಿಐ (ಸಿ)) ಪಕ್ಷದ ಯಾದಗಿರಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ವಿಧಾನಸಭಾ ಚುನಾವಣೆ ಮುಕ್ತಾಯವಾಗುವುದಕ್ಕೆ ಕಾಯುತ್ತಿದ್ದ ಕೆಇಆರ್‍ಸಿ ಅದರ ಬೆನ್ನಲ್ಲೇ ವಿದ್ಯುತ್ ದರ ಹೆಚ್ಚಿಸಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಇರುವುದು, ಅದರ ಜನವಿರೋಧಿ ಧೋರಣೆಯನ್ನು ಪ್ರತಿ ಬಿಂಬಿಸುತ್ತದೆ. ಸದಾಕಾಲ ಕೆ.ಇ.ಆರ್.ಸಿ ನಷ್ಟದಲ್ಲಿದೆ ಎಂಬ ನೆಪವೊಡ್ಡಿ, ಸಾಮಾನ್ಯ ಜನರ ಹೆಗಲ ಮೇಲೆ ಈ ಭಾರ ಹೊರಿಸುವುದು ಖಂಡನೀಯ. ಈಗಾಗಲೇ ಜನಸಾಮಾನ್ಯರು ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದು, ಈ ಭಾರವನ್ನು ಹೊರಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಜೀವನಾವಶ್ಯಕತೆಗಳಲ್ಲಿ ಒಂದಾಗಿರುವ ವಿದ್ಯುತ್ತನ್ನ ಜನರ ಕೈಗೆಟಕುವ ದರದಲ್ಲಿ ನೀಡುವುದು ಸರ್ಕಾರದ ಕರ್ತವ್ಯ. ಆದ್ದರಿಂದ ಅಧಿಕಾರ ವಹಿಸಿಕೊಳ್ಳುವ ನೂತನ ಸರ್ಕಾರವು ಕೂಡಲೇ ಈ ದರ ಏರಿಕೆಯನ್ನು ಪರಿಶೀಲಿಸಿ ಜನವಿರೋಧಿಯಾದ ವಿದ್ಯುತ್ ದರ ಏರಿಕೆಯನ್ನು ಹಿಂಪಡೆಯುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಎಸ್‍ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ಕೆ.ಸೋಮಶೇಖರ್ ಆಗ್ರಹಿಸಿದ್ದಾರೆ.