ವಿದ್ಯುತ್ ದರ ಇಳಿಕೆಗೆ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು, ನ 6- ಕೈಗಾರಿಕೆಗಳಿಗೆ ಆರ್ಥಿಕ ಪುನಶ್ಚೇತನ ನೀಡುವ ದೃಷ್ಟಿಯಿಂದ ಏರಿಕೆ ಮಾಡಿರುವ ವಿದ್ಯುತ್ ದರವನ್ನು ಇಳಿಸಬೇಕೆಂದು ವಿಧಾನ ಸಭೆಯ ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಈಗಾಗಲೇ ಜಿಎಸ್ ಟಿ, ನೋಟು ನಿಷೇಧ ಹಾಗೂ ಕೊರೊನಾ ಸಂಕಷ್ಟಗಳಿಂದಾಗಿ ಕೈಗಾರಿಕೆಗಳು, ವಾಣಿಜ್ಯೋದ್ಮಮಿಗಳು ಮತ್ತು ಜನರ ಮೇಲೆ ವಿದ್ಯುತ್ ದರದ ಬರೆ ಹಾಕದೆ ಸಂದಿಗ್ಧ ಪರಿಸ್ಥಿತಿಯಲ್ಲಿ ತೆರಿಗೆಯ ಹೊರೆಯನ್ನು ಇಳಿಸಿ ಆರ್ಥಿಕತೆಗೆ ಚೈತನ್ಯ ನೀಡಬೇಕೆಂದು ಆಗ್ರಹಿಸಿದ್ದಾರೆ.
ವಿದ್ಯುತ್ ದರಗಳನ್ನು ಹೇಗೆ ಕಡಿಮೆ ಮಾಡಬಹುದು ಹಾಗೂ ಸಂಸ್ಥೆಗಳನ್ನು ಹೇಗೆ ಲಾಭದಾಯಕವನ್ನಾಗಿ ಮಾಡಬೇಕೆಂಬ ಬಗ್ಗೆ ಅಗತ್ಯ ಬಿದ್ದರೆ ಸರ್ಕಾರಕ್ಕೆ ಅಗತ್ಯ ಸಲಹೆಗಳನ್ನು ನೀಡಲು ಸಿದ್ದವಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕೊರೊನಾ ಕಾರಣದಿಂದಾಗಿ ರಾಜ್ಯದಲ್ಲಿ ಉತ್ಪಾದನಾ ಚಟುವಟಿಕೆಗಳು ಕುಂಠಿತಗೊಂಡಿವೆ. ಜನ ಕೊಳ್ಳುವ ಶಕ್ತಿಯನ್ನು‌ ಕಳೆದುಕೊಂಡಿದ್ದಾರೆ. ವಿದ್ಯುತ್ ದರ ಏರಿಕೆಯಿಂದಾಗಿ ನೇರವಾಗಿ ಜನ ಜೇಬಿಗೆ ಕತ್ತರಿ ಬಿದ್ದಿದೆ. ಈ ಅಂಶಗಳನ್ನು ಗಮನಿಸಿ ಅವರಿಗೆ ಈ ವರ್ಷ ದರಗಳನ್ನು ಕಡಿಮೆ ಮಾಡಬೇಕಾದ ಅಗತ್ಯ ವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.