ವಿದ್ಯುತ್ ತಂತಿ ಬೇಲಿ ತಗುಲಿ ಮಹಿಳೆ ಸಾವು: ಆರೋಪಿಗೆ ಶಿಕ್ಷೆ

ಕಲಬುರಗಿ, ನ.12:ಜಿಲ್ಲೆಯ ರಟಕಲ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿನ ಮೋಘಾ ಸೀಮಾಂತರದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಕಬ್ಬಿನ ಬೆಳೆಗೆ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಬೇಜವಾಬ್ದಾರಿಯಿಂದ ವಿದ್ಯುತ್ ವಾಹಕ ತಂತಿ ಬೇಲಿಯನ್ನು ಹಾಕಿದ್ದರಿಂದ ಆ ತಂತಿ ಬೇಲೆ ತಗುಲಿ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತೇಜು ತಂದೆ ಮನು ಜಾಧವ್ ಎಂಬಾತನಿಗೆ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶುಕ್ಲಾಕ್ಷ ಪಾಲನ್ ಅವರು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದರು.
ಸುಲೇಪೇಟ್ ಸಿಪಿಐ ಹಾಗೂ ತನಿಖಾಧಿಕಾರಿ ಎಂ. ವರದರಾಜು ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದರು.
ಪ್ರಕರಣದ ವಿಚಾರಣೆ ಮಾಡಿದ ನ್ಯಾಯಾಧೀಶರು ಆರೋಪ ರುಜುವಾತಾಗಿ ತಪ್ಪಿತಸ್ಥನೆಂದು ನಿರ್ಣಯಿಸಿ ಆರೋಪಿಗೆ ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಎರಡು ಲಕ್ಷ ರೂ.ಗಳ ದಂಡ ವಿಧಿಸಿದರು. ದಂಡ ಕಟ್ಟಲು ತಪ್ಪಿದಲ್ಲಿ ಒಂದು ವರ್ಷ ಸಾದಾ ಶಿಕ್ಷೆಯನ್ನು ವಿಧಿಸಿದರು.
ವಿದ್ಯುತ್ ಕಾಯ್ದೆಯಡಿ ಅಪರಾಧಕ್ಕೆ ಒಂದು ವರ್ಷದ ಕಾರಾಗೃಹ ಶಿಕ್ಷೆ ಹಾಗೂ 25000ರೂ.ಗಳ ದಂಡ, ದಂಡ ಕಟ್ಟಲು ತಪ್ಪಿದಲ್ಲಿ ಮೂರು ತಿಂಗಳು ಸಾದಾ ಶಿಕ್ಷೆ ವಿಧಿಸಿದರು. ಒಟ್ಟು ದಂಡದ ಮೊತ್ತ 2,25,000ರೂ.ಗಳಲ್ಲಿ 1,50,000ರೂ.ಗಳನ್ನು ಮೃತಳ ಪುತ್ರಿ ದೇವಕಿ ಗಂಡ ಕಾಶಿನಾಥ್ ಅವರಿಗೆ ನೀಡಬೇಕು ಮತ್ತು ಜೆಸ್ಕಾಂಗೆ 25000ರೂ.ಗಳನ್ನು ಕೊಡಬೇಕು ಎಂದು ಆದೇಶಿಸಿದರು.
ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರಕ್ಕಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮುಂದೆ ಅರ್ಜಿ ಸಲ್ಲಿಸಲು ನ್ಯಾಯಾಧೀಶರು ನಿರ್ದೇಶನ ನೀಡಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಸ್.ಆರ್. ನರಸಿಂಹಲು ಅವರು ವಾದ ಮಂಡಿಸಿದರು.