ವಿದ್ಯುತ್ ತಂತಿ ತುಳಿದು ರೈತ ಮಹಿಳೆ ಸಾವು

ಮೈಸೂರು,ನ.೭-ಜಮೀನಿಗೆ ನೀರು ಹಾಯಿಸಲು ಹೋಗಿದ್ದ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಮಹಿಳೆ ಸಾವನ್ನಪ್ಪಿರುವ ದುರ್ಘಟನೆ ನಂಜನಗೂಡು ತಾಲೂಕಿನ ಉಸ್ಕೂರುವಿನಲ್ಲಿ ನಡೆದಿದೆ.
ಉಸ್ಕೂರುನ ಗೌರಮ್ಮ(೫೪) ಮೃತ ದುರ್ದೈವಿಯಾಗಿದ್ದು, ತಡರಾತ್ರಿ ಜಮೀನಿಗೆ ನೀರು ಹಾಯಿಸಲು ಹೋದ ವೇಳೆ ಈ ಘಟನೆ ಜರುಗಿದೆ. ಘಟನೆಯ ನಂತರ ಗ್ರಾಮಸ್ಥರು ಚೆಸ್ಕಾಂ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಮೃತ ಮಹಿಳೆ ಕುಟುಂಬಕ್ಕೆ ಪರಿಹಾರ ನೀಡಿ, ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.
ತಂತಿಗಳು ತುಂಡಾಗುವ ಸ್ಥಿತಿಯಲ್ಲಿರುವುದನ್ನು ಕಂಡ ಗ್ರಾಮಸ್ಥರು ಚೆಸ್ಕಾಂ ಅಧಿಕಾರಿಗಳಿಗೆ ತಂತಿಗಳನ್ನು ಬದಲಾಯಿಸುವಂತೆ ಮನವಿ ಮಾಡಿದ್ದರು. ಆದರೆ, ಈ ಬಗ್ಗೆ ಕ್ರಮ ಕೈಗೊಳ್ಳದ ಚೆಸ್ಕಾಂ ಅಧಿಕಾರಿಗಳು ಮೃತ ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡಬೇಕು ಜೊತೆಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.