ವಿದ್ಯುತ್ ಖರೀದಿಯಲ್ಲೂ ಕಮೀಷನ್ಎ ಚ್‌ಡಿಕೆ ಬಾಂಬ್

ಬೆಂಗಳೂರು, ಅ.೨೧-ನಾನು ನಕಲಿ ಸ್ವಾಮಿ ಅಲ್ಲ. ಸೂಕ್ತ ಮಾಹಿತಿಯನ್ನಾಧರಿಸಿ ಹೇಳುತ್ತಿದ್ದು ವಿದ್ಯುತ್ ಖರೀದಿಯಲ್ಲಿ ದೊಡ್ಡ ಮಟ್ಟದಲ್ಲಿಯೇ ಕಮೀಷನ್ ಕೆಲಸ ಮಾಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಹಂಗಾಮಿ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ವಿದ್ಯುತ್ ಖರೀದಿ ಕುರಿತು ಶ್ವೇತಪತ್ರ ಹೊರಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ.ನಗರದಲ್ಲಿಂದು ಜೆಪಿ ಭವನದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ವಿದ್ಯುತ್ ಅಭಾವ ಸೃಷ್ಟಿಸಿ ಈಗ ವಿದ್ಯುತ್ ಖರೀದಿಗೆ ಮುಂದಾಗಿದೆ. ಇದರಲ್ಲಿ ಕಮಿಷನ್ ಮಾತುಗಳು ಕೇಳಿಬರುತ್ತಿದ್ದು,ದೆಹಲಿವರೆಗೂ ಕಮಿಷನ್ ತಲುಪಿದೆ ಎಂದು ದೂರಿದರು.
ಸದ್ಯಕ್ಕೆ ಯಾವುದೇ ದಾಖಲೆಗಳನ್ನು ಬಿಡುಗಡೆ ಮಾಡುವುದಿಲ್ಲ.ಆದರೆ, ಕಾಂಗ್ರೆಸ್ ಸರ್ಕಾರದಲ್ಲಿ ರಾಜ್ಯದ ಪರಿಸ್ಥಿತಿ ಬಗ್ಗೆ ಜನರಿಗೆ ತಿಳಿಸುತ್ತೇನೆ. ಕಮಿಷನ್, ಶೇಕಡಾವಾರು ಸಾರ್ವಜನಿಕರಿಗೆ ಮನೋರಂಜನೆ ಸಿಗುತ್ತಿದೆ. ಕಾಂಗ್ರೆಸ್ ಸರ್ಕಾರಕ್ಕೆ ನುಡಿದಂತೆ ನಡೆದಿದ್ದೇವೆ ಎಂಬ ಭಾವನೆ ಇದೆ. ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಇದೆ ಹಾಗೂ ಅಂತರ್ಜಲ ಕುಸಿತವಾಗಿದೆ. ಸರ್ಕಾರ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದರು.ಮುಂದಿನ ದಿನಗಳಲ್ಲಿ ಯಾರು ಬಟ್ಟೆ ಹರಿದುಕೊಳ್ತಾರೆ ಎಂಬುದು ಗೊತ್ತಾಗಲಿದೆ ಎಂದ ಅವರು, ಡಿಕೆ ಶಿವಕುಮಾರ್ ಬಂಧಿಖಾನೆ ಇಲಾಖೆ ಸಚಿವ ಆಗಿದ ಕಾಲದಿಂದಲೂ ದುಡಿದ್ದು, ಸಾಕು ಈಗಲಾದರೂ ನಿಲ್ಲಿಸಿ ಎಂದು ಅವರು ವ್ಯಂಗ್ಯವಾಡಿದರು.ಪ್ರಮುಖವಾಗಿ ರಾಜ್ಯದಲ್ಲಿ ಬರ ಇರುವುದು ನಿಜ. ಆದರೆ, ಅದರ ನುವೆಯೂ ಸಾಮರ್ಥ್ಯಕ್ಕೆ ತಕ್ಕಷ್ಟು ವಿದ್ಯುತ್ ಉತ್ಪಾದನೆ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಸರ್ಕಾರದ ಹೇಳಿಕೆ ಪ್ರಕಾರವೇ ಕೊರತೆ ಇರುವುದು ೩ ಕೋಟಿ ಯುನಿಟ್ ಅಷ್ಟೇ.ಕೃತಕ ಅಭಾವ ಸೃಷ್ಟಿ ಮಾಡಿರುವುದು ಸರ್ಕಾರ. ವಿದ್ಯುತ್ ಉತ್ಪಾದನೆ ಬಗ್ಗೆ ಗಮನವನ್ನೇ ಕೊಡಲಿಲ್ಲ. ನನ್ನ ಕಾಲದಲ್ಲಿ ಕೃತಕ ಅಭಾವ ಸೃಷ್ಟಿ ಮಾಡಿದ್ದೀವಾ? ದಾಖಲೆ ತೆಗೆಯಿರಿ ಎಂದು ಅವರು ಸವಾಲೆಸೆದರು.ನವರಾತ್ರಿಯ ಸಮಯದಲ್ಲಿ ನಾನು ಹೇಳುತ್ತಿದ್ದೇನೆ, ನನ್ನ ಕಾಲದಲ್ಲಿ ಯಾವುದೇ ಕೆಲಸಕ್ಕೆ ನಾನು ಕಮಿಷನ್ ಫಿಕ್ಸ್ ಮಾಡಿರಲಿಲ್ಲ, ಮುಂದೆಯೂ ಮಾಡುವವನಲ್ಲ. ನನಗೆ ಗೊತ್ತಿರುವ ಹಾಗೆ ಇಂಧನ ಸಚಿವ ಜಾರ್ಜ್‌ಗೆ ದುಡ್ಡಿಗೆ ಏನೂ ಕೊರತೆ ಇಲ್ಲ. ಜಾರ್ಜ್‌ಗೆ ಹೈಕಮಾಂಡ್ ನವರು ಏನಾದರೂ ಫಿಕ್ಸ್ ಮಾಡಿದ್ದಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.ಹಿಂದಿನ ಸರ್ಕಾರದ ಪಾಪದ ಫಲ ಎಂದು ಸದಾ ಟೀಕೆ ಮಾಡುತ್ತಾರೆ. ಹಿಂದಿನ ಸರ್ಕಾರದವರದ್ದು ಹಾಗಿರಲಿ, ೧೩೫ ಸೀಟ್ ಗೆದ್ದು ಅಧಿಕಾರಕ್ಕೆ ಬಂದ ಇವರೇನು ಮಾಡುತ್ತಿದ್ದಾರೆ ಎಂದ ಅವರು, ರಾಜ್ಯದಲ್ಲಿ ವಿದ್ಯುತ್‌ನ ಕೃತಕ ಅಭಾವ ಸೃಷ್ಟಿಯಾಗಿದೆ. ಆದರೆ, ಕಾಂಗ್ರೆಸ್‌ನವರು ಕೇವಲ ಗ್ಯಾರಂಟಿ ಜಾರಿಯ ಹೆಸರಿನಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಟೀಕಿಸಿದರು.ಗ್ಯಾರಂಟಿ ಜಾರಿ ಮಾಡಿದ್ದೇವೆ, ನುಡಿದಂತೆ ನಡೆದಿದ್ದೇವೆ ಎಂದು ಕಾಂಗ್ರೆಸ್‌ನವರು ಹೇಳಿಕೊಂಡು ತಿರುಗುತ್ತಿದ್ದಾರೆ. ಅದರ ಪ್ರಚಾರಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಅದಕ್ಕೊದಿಷ್ಟು ದುಡ್ಡು ಖರ್ಚು ಮಾಡುತ್ತಿದ್ದಾರೆ. ಬರೀ ಇಷ್ಟರಲ್ಲೇ ಸಮಯ ಕಳೆಯುತ್ತಿದ್ದಾರೆಯೇ ವಿನಃ ವಿದ್ಯುತ್ ಉತ್ಪಾದನೆ ಸೇರಿದಂತೆ ರಾಜ್ಯ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಲೇ ಇಲ್ಲ ಎಂದು ಆರೋಪಿಸಿದರು.ಮತ್ತೊಂದೆಡೆ, ನಮ್ಮಲ್ಲಿರುವ ಥರ್ಮಲ್ ವಿದ್ಯುತ್ ಪ್ಲಾಂಟ್‌ಗಳಿಗೆ ಪ್ರತಿ ದಿನ ಬೇಕಿರುವ ಕಲ್ಲಿದ್ದಲು ೬೨,೦೦೦ ಟನ್. ಈ ಲೆಕ್ಕಾಚಾರದಲ್ಲಿ ಒಂದು ವರ್ಷಕ್ಕೆ ಬೇಕಾಗುವಷ್ಟು ಸ್ಟಾಕ್ ಇಟ್ಟುಕೊಂಡರೆ ಬೇರೆ ಖರೀದಿ ಮಾಡುವ ಅಗತ್ಯವೇ ಇರುವುದಿಲ್ಲ. ಆದರೆ, ಇಂತಹ ವಿಚಾರಗಳ ಬಗ್ಗೆ ಇವರು ಗಮನವೇ ಹರಿಸುತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ರೈತರ ಸಂಕಷ್ಟ ಕೇಳೋರು ಯಾರು?
ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀರಾವರಿ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ರೈತರ ಪರಿಸ್ಥಿತಿ ಶೋಚನೀಯವಾಗಿದೆ. ಒಂದು ಕಡೆ ಮುಖ್ಯಮಂತ್ರಿಗಳು ರೈತರ ಪಂಪ್‌ಸೆಟ್‌ಗಳಿಗೆ ನಿರಂತರ ೫ ಗಂಟೆ ವಿದ್ಯುತ್ ಕೊಡಲು ಸೂಚನೆ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. ಆದರೆ, ೨ ಗಂಟೆ ಕೂಡ ವಿದ್ಯುತ್ ನೀಡಲಾಗುತ್ತಿಲ್ಲ. ಈ ಮಧ್ಯೆ, ವಿದ್ಯುತ್ ಅಭಾವ ಇದೆ ಎಂದೂ ಹೇಳುತ್ತಿದ್ದಾರೆ. ವಿದ್ಯುತ್ ಸಮಸ್ಯೆ ನಿಭಾಯಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಪಾಕ್ ಬೆಂಬಲಕ್ಕೆ ಸಂಪುಟ ಪಟಲಾಂ
ನೂರಾರು ಸಮಸ್ಯೆಗಳ ಬಗ್ಗೆ ಗಮನಹರಿಸುವ ಬದಲು ಕಾಂಗ್ರೆಸ್ ಸರ್ಕಾರದ ಇಡೀ ಸಚಿವ ಸಂಪುಟ ಪಟಲಾಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ, ಪಾಕಿಸ್ತಾನ ನಡುವಣ ವಿಶ್ವಕಪ್ ಕ್ರಿಕೆಟ್ ಪಂದ್ಯ ನೋಡಲು ಹೋಗಿತ್ತು. ಇವರೇನು ಪಾಕಿಸ್ತಾನವನ್ನು ಬೆಂಬಲಿಸಲು ಹೋಗಿದ್ದರಾ ಎಂದು ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ವಿಶ್ವಕಪ್ ಪಂದ್ಯ ನೋಡಲು ಹೋಗಿದ್ದು ತಪ್ಪೆನ್ನುತ್ತಿಲ್ಲ. ಭಾರತ ತಂಡದ ಪಂದ್ಯ ಇದ್ದಿದ್ದು ಅದನ್ನು ನೋಡಲು ಹೋಗಿದ್ದರೆ ಅದಕ್ಕೊಂದು ಅರ್ಥವಿರುತ್ತಿತ್ತು. ಆದರೆ ಅಲ್ಲಿ ಇದ್ದಿದ್ದು, ಆಸ್ಟ್ರೇಲಿಯಾ, ಪಾಕಿಸ್ತಾನ ನಡುವಣ ಪಂದ್ಯ. ರಾಜ್ಯದ ಸಮಸ್ಯೆಗಳ ಬಗ್ಗೆ ಗಮನಹರಿಸುವ ಬದಲು ಅಲ್ಲಿ ಹೋಗಿ ಸಮಯ ಕಳೆಯಬೇಕಿತ್ತಾ ಎಂಬುದಷ್ಟೇ ನನ್ನ ಪ್ರಶ್ನೆ ಎಂದರು.