ವಿದ್ಯುತ್ ಕಳ್ಳತನ ಆರೋಪಿಗೆ ಜೈಲು ಶಿಕ್ಷೆ

ಕಲಬುರಗಿ:ಮಾ.31:ವಿದ್ಯುತ್ ಕಳ್ಳತನದ ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಿ ವಿಶೇಷ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶುಕ್ಲಾಕ್ಷ ಪಾಲನ್ ಅವರು ತೀರ್ಪು ನೀಡಿದ್ದಾರೆ.
ಚಿಂಚೋಳಿ ತಾಲ್ಲೂಕಿನ ಮಿರ್ಯಾಣ್ ಗ್ರಾಮದ ಕ್ವಾರಿ ಯಂತ್ರದ ಮಾಲಿಕ ನವಿನಗೌಡ ಪಾಟೀಲ್ (32) ಹಾಗೂ ಬಾಡಿಗೆದಾರ ಕೃಷ್ಣಯ್ಯ ತಂದೆ ಬಾಳಯ್ಯ ಪೂಜಾರಿ (45) ಅವರೇ ಶಿಕ್ಷೆಗೆ ಒಳಗಾದ ಆರೋಪಿಗಳು.
ಮಿರಿಯಾಣಾ ಗ್ರಾಮದಲ್ಲಿ ಉದ್ದೇಶಪೂರ್ವಕವಾಗಿ ಅನಧಿಕೃತವಾಗಿ ಆರ್‍ಎನ್‍ಪಿ 18109 ಸಿಟಿಆರ್ ಪೆಟ್ಟಿಗೆಯ ಸೀಲು ತೆಗೆದುಹಾಕಿ ಪಿಸಿ ಸಂಪರ್ಕವನ್ನು ತೆಗೆದು ಮಾಪಕವನ್ನು ಶೇಕಡಾ 33ರಷ್ಟು ಕಡಿಮೆ ದಾಖಲಾಗುವಂತೆ ಮಾಡಿ ವಿದ್ಯುತ್ ಕಳ್ಳತನ ಮಾಡಿಕೊಂಡ ಪ್ರಕರಣವನ್ನು ಕಳೆದ 2014ರ ಡಿಸೆಂಬರ್ 12ರಂದು ಜೆಸ್ಕಾಂ ಜಾಗೃತದಳದವರು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗಳಿಗೆ ನ್ಯಾಯಾಧೀಶರು ತಲಾ ಎರಡು ಲಕ್ಷ ರೂ.ಗಳ ದಂಡ ಹಾಗೂ 2 ವರ್ಷಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸಿದರು. ದಂಡದ ಮೊತ್ತ ಭರಿಸದೇ ಹೋದಲ್ಲಿ 6 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದರು.
ಪ್ರಕರಣದಲ್ಲಿನ ಮೂರು ಮತ್ತು ನಾಲ್ಕನೇ ಆರೋಪಿಗಳ ವಿರುದ್ಧ ಸಾಕ್ಷಾಧಾರಗಳು ಕಂಡುಬಂದಿರದೇ ಇರುವುದರಿಂದ ಅವರನ್ನು ಬಿಡುಗಡೆ ಮಾಡಿದ್ದು, ದಂಡದಿಂದ ಬಂದ ಹಣದಲ್ಲಿ ವಿದ್ಯುತ್ ಕಂಪೆನಿಗೆ ಮೂರು ಲಕ್ಷ ರೂ.ಗಳನ್ನು ನೀಡಲು ನ್ಯಾಯಾಧೀಶರು ಆದೇಶಿಸಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಸ್.ಆರ್. ನರಸಿಂಹಲು ಅವರು ವಾದ ಮಂಡಿಸಿದ್ದರು.