ವಿದ್ಯುತ್ ಕಣ್ಣಾಮುಚ್ಚಾಲೆ: ರೈತರು ಹೈರಾಣ

ಔರಾದ :ಮಾ.4: ತಾಲೂಕಿನ ಗ್ರಾಮೀಣ ಪ್ರದೇಶಗಳಾದ ಬೋರಾಳ, ತುಳಜಾಪುರ, ಎಕಲಾರ, ಕೊಳ್ಳೂರ, ಬರದಾಪೂರ ಗ್ರಾಮದ ಪ್ರದೇಶದಲ್ಲಿ ಪಂಪ್‍ಸೆಟ್‍ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದಿರುವುದರಿಂದ ರೈತರು ಹೈರಾಣಾಗಿದ್ದಾರೆ. ಪರಿಣಾಮ, ಬೆಳೆಗಳಿಗೆ ನೀರುಣಿಸಲು ಕೃಷಿಕರು ತೊಂದರೆ ಅನುಭವಿಸವಂತಾಗಿದೆ.

ರೈತರ ಪಂಪ್‍ಸೆಟ್‍ಗಳಿಗೆ ಗುಣಮಟ್ಟದ (ತ್ರಿಫೇಸ್) ವಿದ್ಯುತ್ ಅನ್ನು ನಿತ್ಯವೂ 7 ತಾಸು ನೀಡುತ್ತಿದ್ದೇವೆ ಎಂದು ಸರ್ಕಾರ ಹೇಳುತ್ತದೆ. ಆದರೆ, ವಾಸ್ತವದಲ್ಲಿ ಇದು ನಡೆಯುತ್ತಿಲ್ಲ ಇತ್ತೀಚಿನ ದಿನಗಳಲ್ಲಿ ಅನುಸರಿಸುತ್ತಿಲ್ಲ. ವಿದ್ಯುತ್ ಸೌಲಭ್ಯ ಇದ್ದೂ ಇಲ್ಲದಂತಾದ ಸ್ಥಿತಿ ಎದುರಾಗಿದೆ.

ಅನಿಯಮಿತ ವಿದ್ಯುತ್ ಪೂರೈಕೆಯಿಂದಾಗಿ ಬೆಳೆಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಅದರಲ್ಲೂ ವಿಶೇಷವಾಗಿ ತರಕಾರಿ ಹಾಗೂ ಮೇಕ್ಕೆ ಜೋಳ ಬೆಳೆದವರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ ಎನ್ನುವುದು ರೈತರ ಅಳಲಾಗಿದೆ. ಅನಧಿಕೃತ ಲೋಡ್‍ಶೆಡ್ಡಿಂಗ್ ಮಾಡುತ್ತಿರುವುದಕ್ಕೆ ಕಾರಣ ಕೇಳಿದರೆ, ಸಿಬ್ಬಂದಿ ಅಧಿಕಾರಿಗಳತ್ತ ಹಾಗೂ ಅಧಿಕಾರಿಗಳು ಹಿರಿಯ ಅಧಿಕಾರಿಗಳತ್ತ ಕೈ ತೋರುವುದು ನಡೆಯುತ್ತಿದೆ. ಇದು ರೈತರಿಗೆ ಸಮಸ್ಯೆ ತಂದೊಡ್ಡಿದೆ.