
ಮುಳಬಾಗಿಲು, ಮೇ.೧೫-ಆರ್.ಆರ್. ನಂಬರ್ ಜೋಡಣೆ ನೆಪದಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಲಿಂಕ್ ಮಾಡಿ ಉಚಿತ ವಿದ್ಯುತ್ ಕಡಿತಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ರೈತ ವಿರೋಧಿ ದೋರಣೆ ವಾಪಸ್ ಪಡೆಯಬೇಕೆಂದು ರೈತ ಸಂಘದಿಂದ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಪ್ರಗತಿ ಪರ ರೈತ ಪಧ್ಮಘಟ್ಟ ದರ್ಮ ರವರ ಕೃಷಿ ಪಂಪ್‌ಸೆಟ್ ಮುಂದೆ ಬಿ.ಜೆ.ಪಿ ಹಠವೋ ಕೃಷಿ ಕ್ಷೇತ್ರ ಬಚಾವೋ ಭಿತ್ತಿ ಪತ್ರಗಳನ್ನು ಪ್ರದರ್ಶನ ಮಾಡಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಕೇಂದ್ರ ಸರ್ಕಾರದ ರೈತ ವಿರೋದಿ ಕಾಯ್ದೆಗಳನ್ನು ಜಾರಿಗೆ ತರುವುದು ನೋಡಿದರೆ ಮುಂದಿನ ಕೆಲವೇ ವರ್ಷಗಳಲ್ಲಿ ಇಡೀ ಕೃಷಿ ಕ್ಷೇತ್ರವನ್ನು ಅದಾನಿ ಅಂಬಾನಿ ಕೈಗೆ ನೀಡುವ ಮುಖಾಂತರ ಅನ್ನ ನೀಡುವ ಅನ್ನದಾತನನ್ನು ಬೀದಿಗೆ ತಳ್ಳಿ ತುತ್ತು ಅನ್ನಕ್ಕಾಗಿ ಕಾರ್ಪೋರೇಟ್ ಕಂಪನಿಗಳ ಮಾಲೀಕರ ಮುಂದೆ ಕೈಚಾಚುವ ಜೊತೆಗೆ ಕೃಷಿ ಇಲ್ಲದ ರೈತರು ಉದ್ಯೋಗಕ್ಕಾಗಿ ಅದಾನಿ ಅಂಬಾನಿಯ ಮನೆ ಬಾಗಿಲು ಕಾಯುವ ಮಟ್ಟಕ್ಕೆ ಸರ್ಕಾರಗಳು ನಡೆದುಕೊಳ್ಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದುಬಾರಿ ಆಗಿರುವ ಕೃಷಿ ಕ್ಷೇತ್ರದಲ್ಲಿ ಒಂದು ಎಕರೆ ಬೆಳೆ ತೆಗೆಯ ಬೇಕಾದರೆ ಕನಿಷ್ಠ ೩ ಲಕ್ಷ ವೆಚ್ಚ ಬರುತ್ತದೆ ಅದರಲ್ಲಿ ಬೆಳೆ ಬೆಳೆದ ನಂತರ ಕೈಗೆ ಬರುವ ಸಮಯದಲ್ಲಿ ಬೆಲೆ ಕುಸಿತ ಪ್ರಕೃತಿ ವಿಕೋಪಗಳ ಹಾವಳಿಗೆ ಸಿಲುಕಿದರೆ ಹಾಕಿದ ಬಂಡವಾಳವೂ ಕೈಗೆ ಸಿಗದೆ ಸಾಲಗಾರರ ಕಾಟ ತಾಳಲಾರದೆ ಸ್ವಾಭಿಮಾನದ ಬದುಕಿಗೆ ಅಂತ್ಯ ಹೇಳುವ ಮಟ್ಟಕ್ಕೆ ವ್ಯವಸಾಯ ಹದಗೆಟ್ಟಿದೆ ಸರಿಪಡಿಸಿ ರೈತರ ಪರ ನಿಲ್ಲಬೇಕಾದ ಬಿಜೆಪಿ ಸರ್ಕಾರ ರೈತರನ್ನು ಜೀತದಾಳುಗಳಾಗಿ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಲ್ಲೂಕಾದ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ ಕೇಂದ್ರ ಸರ್ಕಾರ ಆರ್.ಆರ್ ನಂಬರ್ ನೆಪದಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಕಡ್ಡಾಯವಾಗಿ ಆಧಾರ್ ನಂಬರ್ ಲಿಂಕ್ ಮಾಡಲು ೬ ತಿಂಗಳ ಗಡುವನ್ನು ಕೆ.ಇ.ಆರ್.ಸಿ ನೀಡಿರುವುದು ರೈತರ ಕೆಂಗೆಣ್ಣಿಗೆ ಗುರಿಯಾಗಿದೆ. ವಿದ್ಯುತ್ ದರ ಪರಿಷ್ಕರಣೆ ಆದೇಶದ ಜೊತೆಯಲ್ಲಿ ಇದನ್ನು ನೀಡಿರುವ ಕೇಂದ್ರ ಸರ್ಕಾರ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಇದುವರೆಗೂ ನೀಡುತ್ತಿದ್ದ ಉಚಿತ ವಿದ್ಯುತ್ ಕಸಿಯುವ ಆದೇಶವಾಗಿದೆ ಎಂದು ರೈತ ವಿರೋಧಿ ಬಿ.ಜೆ.ಪಿ ಸರ್ಕಾರದ ವಿರುದ್ದ ಕಿಡಿ ಕಾರಿದರು.
ಕೇಂದ್ರ ಹೊಸ ನೀತಿ ಅನ್ವಯ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಆಳವಡಿಕೆ ಮಾಡಬೇಕು ಮೊದಲು ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್‌ನ್ನು ರೈತರು ಪಾವತಿಸಿದರೆ ಬಳಿಕ ಸಬ್ಸಿಡಿ ಹಣವನ್ನು ಸರ್ಕಾರ ನೀಡುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಇದೇ ರೀತಿ ಅಡುಗೆ ಗ್ಯಾಸ್ ಬೆಲೆಯನ್ನು ಏರಿಕೆ ಮಾಡಿದಾಗ ಮೊದಲು ಗ್ರಾಹಕರು ಪಾವತಿಸಿದರೆ ಆನಂತರ ಸರ್ಕಾರ ನೀಡುತ್ತದೆ ಎಂದು ವಂಚನೆ ಮಾಡಿರುವುದು ಕಣ್ಣು ಮುಂದೆಯೇ ಇದೆ.
ಯಾವುದೇ ಕಾರಣಕ್ಕೂ ಆರ್.ಆರ್ ನೆಪದಲ್ಲಿ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಆದಾರ್ ಲಿಂಕ್ ಮಾಡುವ ಆದೇಶವನ್ನು ವಾಪಸ್ ಪಡೆಯಬೇಕು ಇಲ್ಲವಾದರೆ ರಾಜ್ಯದ ಎಲ್ಲಾ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳನ್ನು ಜಾನುವಾರುಗಳು ಕೃಷಿ ಪಂಪ್‌ಸೆಟ್ ತರಕಾರಿ ಸಮೇತ ಬಂದ್ ಮಾಡುವ ಎಚ್ಚರಿಕೆಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದರು.