ವಿದ್ಯುತ್ ಕಂಬ ತೆರವುಗೊಳಿಸುವಂತೆ ಆಗ್ರಹ

Oplus_131072

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.06: ಹಲವು ವರ್ಷಗಳಿಂದ ವಿದ್ಯುತ್ ಕಂಬಗಳು ಅಪಾಯಕ್ಕೆ ಆಹ್ವಾನಿಸುತ್ತಿದ್ದರೂ ತೆರವುಗೊಳಿಸದೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಅಗಸರಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.
ತಾಲೂಕಿನ ಬೂಕನಕೆರೆ ಹೋಬಳಿಯ ಅಗಸರಹಳ್ಳಿ ಗ್ರಾಮದಲ್ಲಿ ವಿದ್ಯುತ್ ಕಂಬ ರಸ್ತೆ ಮಧ್ಯದಲ್ಲಿರುವುದಲ್ಲದೆ ವಿದ್ಯುತ್ ಕಂಬ ತುಂಬಾ ಹಳೆಯದಾಗಿದ್ದು ಮುರಿಯುವ ಹಂತಕ್ಕೂ ಕೂಡ ತಲುಪಿದೆ. ಕಂಬದ ಮೇಲಿರುವ ಸಿಮೆಂಟ್ ಒಡೆದು ಬಿರುಕು ಬಿಟ್ಟಿದ್ದು ಬೀಳುವ ಹಂತದಲ್ಲಿದೆ.
ಗ್ರಾಮದ ನೂರಾರು ಸಾರ್ವಜನಿಕರು, ದನಕರುಗಳು ಹಾಗು ಶಾಲಾ ಮಕ್ಕಳು ಈ ಮೂಲಕವೇ ಸಂಚರಿಸುತ್ತಾರೆ. ಇಂತಹ ರಸ್ತೆ ಮಧ್ಯದಲ್ಲಿರುವ ಕಂಬ ಗಾಳಿ ಮತ್ತು ಮಳೆಯ ರಭಸಕ್ಕೆ ಯಾವಾಗಬೇಕಾದರೂ ಬಿದ್ದು ಅನಾಹುತ ಸಂಭವಿಸಬಹುದು ಎಂದು ಆರೋಪಿಸಿದ್ದಾರೆ. ವಿದ್ಯುತ್ ಕಂಬ ತೆರವುಗೊಳಿಸುವುದರ ಸಂಬಂಧ 21-01-2011 ರಂದು ಶಾಲಾ ಮುಖ್ಯೋಪಾಧ್ಯಾಯರು ವಿದ್ಯುತ್ ನಿಗಮದ ಅಧಿಕಾರಿಗಳಿಗೆ ದೂರು ನೀಡಿದ್ದರು ಗ್ರಾಮಸ್ಥರಾದ ನಾವುಗಳು ಕೂಡ 22-02-2014 ರಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ,
17-03-23 ರಂದು ಮುರುಕನಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು ಈ ದೂರಿನ ಮೇರೆಗೆ ಮುರುಕನಹಳ್ಳಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕೂಡ ಚಾಮುಂಡೇಶ್ವರಿ ವಿದ್ಯುತ್ ನಿಗಮದ ಅಧಿಕಾರಿಗಳಿಗೆ ಕಂಬ ತರೆವುಗೊಳಿಸುವಂತೆ ಪತ್ರ ಬರೆದಿದ್ದರೂ ಕೂಡ ಇದುವರೆಗೂ ಯಾರೂ ಕ್ರಮ ವಹಿಸಿಲ್ಲ ಎಂದು ಗ್ರಾಮಸ್ಥರಾದ ಡೈರಿ ಮಾಜಿ ಕಾರ್ಯದರ್ಶಿ ರಾಮಕೃಷ್ಣ,ಎ.ವಿ.ಗೋಪಾಲ್,ಶ್ರೀನಿವಾಸ್, ಗೋವಿಂದೇಗೌಡ,ಎ.ಎಲ್.ರಮೇಶ್, ಎ.ವಿ.ಚಂದ್ರೇಗೌಡ,ಎ.ಎನ್.ಮಹೇಶ್ ಸೇರಿದಂತೆ ಹಲವು ಗ್ರಾಮಸ್ಥರು ಆರೋಪಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಈಗಲಾದರು ಅನಾಹುತ ಸಂಭವಿಸುವ ಮುನ್ನ ಇತ್ತ ಗಮನ ಹರಿಸಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.