ವಿದ್ಯುತ್ ಕಂಬ ತೆರವುಗೊಳಿಸದೆ ರಸ್ತೆ ಕಾಮಗಾರಿ:ಗ್ರಾಮಸ್ಥರ ಆಕ್ಷೇಪ

ಹುಳಿಯಾರು, ಅ. ೨೯- ವಿದ್ಯುತ್ ಕಂಬಗಳನ್ನು ತೆರವು ಮಾಡದೆ ರಸ್ತೆ ಕಾಮಗಾರಿ ಮಾಡಿರುವುದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನಾನುಕೂಲವಾಗುತ್ತಿರುವ ಬಗ್ಗೆ ಹೋಬಳಿಯ ಕೋರಗೆರೆ ಗ್ರಾಮ ಪಂಚಾಯ್ತಿಯ ಬರಗೀಹಳ್ಳಿಯಿಂದ ದೂರು ಕೇಳಿ ಬಂದಿದೆ.
ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಸುಮಾರು ೧ ಕೋಟಿ ರೂ. ವೆಚ್ಚದಲ್ಲಿ ಬರಗೀಹಳ್ಳಿಯಲ್ಲಿ ಸಿಸಿರಸ್ತೆ ಹಾಗೂ ಸಿಸಿ ಚರಂಡಿ ಮಾಡಲಾಗಿದೆ. ಈ ಯೋಜನೆಯಲ್ಲಿ ಸಮದ್‌ಸಾಬ್ ಮನೆಯಿಂದ ಪೋಸ್ಟ್ ಮನೆಯವರೆವಿಗೆ ೧೨೦ ಮೀಟರ್ ಸಿಸಿ ರಸ್ತೆ ಮಾಡಲಾಗಿದೆ. ಕೆಆರೈಡಿಎಲ್ ಸಂಸ್ಥೆ ಕಾಮಗಾರಿಯ ಗುತ್ತಿಗೆ ಪಡೆದಿತ್ತು. ರಸ್ತೆ ನಿರ್ಮಾಣ ಕಾರ್ಯ ಆರಂಭಿಸಿದ ಗುತ್ತಿಗೆದಾರರು ರಸ್ತೆಗೆ ಹೊಂದಿಕೊಂಡಂತಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸದೆ ಕಾಂಕ್ರಿಟ್ ಹಾಕಿದ್ದಾರೆ.
ಈ ಸಂದರ್ಭದಲ್ಲಿ ಸಾರ್ವಜನಿಕರು ಎಷ್ಟೇ ವಿರೋಧ ಮಾಡಿದರೂ ಬೆಸ್ಕಾಂನವರಿಗೆ ಹೇಳಲಾಗಿದ್ದು ಅವರು ಬಂದು ತೆರವು ಮಾಡುತ್ತಾರೆ. ನಂತರ ಬಂದು ಪ್ಯಾಚ್ ವರ್ಕ್ ಮಾಡಿ ಹೋಗುತ್ತೇವೆ ಎಂದೇಳಿ ಕಾಮಗಾರಿಯನ್ನು ಪೂರ್ಣಗೊಳಿಸಿ ಕಾಮಗಾರಿಯ ಪೂರ ಹಣ ಪಡೆದಿದ್ದಾರೆ. ಆದರೆ ಕಾಮಗಾರಿ ಮುಗಿದು ೮ ತಿಂಗಳಾದರೂ ಗುತ್ತಿಗೆದಾರರು ತಿರುಗಿಯೂ ಸಹ ನೋಡಿಲ್ಲ. ಪರಿಣಾಮ ಈ ರಸ್ತೆಯಲ್ಲಿ ಇರುವ ಶಾಲೆ, ಪೋಸ್ಟ್ ಆಫೀಸ್‌ಗೆ ಓಡಾಡಲು ಸಾರ್ವಜನಿಕರಿಗೆ ಭಾರಿ ತೊಂದರೆಯಾಗಿದೆ. ನಾಲ್ಕು ಚಕ್ರದ ವಾಹನ ಬರಲಾಗದಷ್ಟು ವಿದ್ಯುತ್ ಕಂಬಗಳು ಮತು ಕಂಬಗಳ ಗೈ ವೈರ್‌ಗಳು ಕಿರಿಕಿರಿ ಮಾಡುತ್ತಿವೆ. ಈ ಬಗ್ಗೆ ಪಂಚಾಯ್ತಿ ಅಧಿಕಾರಿಗಳಿಗೆ ದೂರು ನೀಡಿದರೂ ಸಹ ಸಂಬಂಧಪಟ್ಟವರ ಗಮನಕ್ಕೆ ತರುವುದಾಗಿ ತಿಳಿಸಿ ಕೈ ತೊಳೆದುಕೊಳ್ಳುತ್ತಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಕೆಆರೈಡಿಎಲ್ ಸಹಾಯಕ ಕಾರ್ಯಪಾಲಕ ಅಭಿಯಂತರರು ಕಾಮಗಾರಿ ನಿರ್ಮಾಣ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿ ಗುಣಮಟ್ಟ ವೀಕ್ಷಿಸಬೇಕು. ಆದರೆ ಅವರು ಸ್ಥಳಕ್ಕೆ ಬಾರದೆ ಮಾಡಿದ ಎಡವಟ್ಟಿನಿಂದ ಸಾರ್ವಜನಿಕರಿಗೆ ಅನಾನುಕೂಲವಾಗಿದೆ. ಇನ್ನಾದರೂ ವಿದ್ಯುತ್ ಕಂಬಗಳನ್ನು ತೆರವು ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಜನರ ಅನುಕೂಲಕ್ಕೆ ಮಾಡುತಿಲ್ಲ. ಬದಲಾಗಿ ಅಧಿಕಾರಿಗಳು, ಗುತ್ತಿಗೆದಾರರ ಜೇಬು ತುಂಬಿಸಲು ಮಾಡುತ್ತಿದ್ದಾರೆ. ಇದಕ್ಕೆ ಬರಗೀಹಳ್ಳಿಯ ರಸ್ತೆ ಕಾಮಗಾರಿ ಸ್ಪಷ್ಟ ನಿದರ್ಶನವಾಗಿದೆ. ವಿದ್ಯುತ್ ಕಂಬಗಳನ್ನು ತೆರವು ಮಾಡದೆ ಸಿಸಿ ರಸ್ತೆ ಮಾಡಿರುವುದರಿಂದ ಲಕ್ಷಾಂತರ ರೂ. ಜನರ ತೆರಿಗೆ ಹಣ ವ್ಯರ್ಥವಾಗಿದೆ. ಕಾಮಗಾರಿ ಮಾಡುವಾಗಲೇ ಕಂಬ ತೆರವಿಗೆ ಒತ್ತಾಯಿಸಿದ್ದರೂ ಸಹ ಕಿವಿ ಕೊಡದೆ ಆಗ ಈಗ ಎಂದರು. ಪಂಚಾಯ್ತಿಗೆ ಹೇಳಿದರೆ ನಮಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಾರೆ. ತಕ್ಷಣ ವಿದ್ಯುತ್ ಕಂಬ ತೆರವು ಮಾಡದಿದ್ದರೆ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ಬರಗೀಹಳ್ಳಿ ವಾಸಿ ಫಕೃದ್ಧೀನ್ ಹೇಳಿದ್ದಾರೆ.
ಅಗತ್ಯವಿರುವ ಕಾಮಗಾರಿಯ ಅನುಮೋದನೆ ಮಾಡಿ ಸರ್ಕಾರಕ್ಕೆ ನಾವು ಕಳಿಸುತ್ತೇವೆ. ಅಲ್ಲಿಂದ ಹಣ ಮಂಜೂರು ಮಾಡಿ ಟೆಂಡರ್ ಕರೆದು ಅನುಷ್ಟಾನಕ್ಕೆ ಅನುಮತಿ ಕೊಡುತ್ತಾರೆ. ಗುತ್ತಿಗೆದಾರರು ಕಾಮಗಾರಿ ಹಣ ಕೊಟ್ಟ ನಂತರ ಕೆಲಸ ಆರಂಭಿಸುತ್ತಾರೆ. ಹಾಗಾಗಿ ಬರಗೀಹಳ್ಳಿ ರಸ್ತೆಯ ಪೂರಾ ಹಣ ಕೆಆರೈಡಿಎಲ್ ಸಂಸ್ಥೆಗೆ ಕೊಡಲಾಗಿದೆ. ಪಂಚಾಯ್ತಿಯಿಂದಲೂ ವಿದ್ಯುತ್ ಕಂಬಗಳ ತೆರವಿಗೆ ಕೆಆರೈಡಿಎಲ್ ಸಹಾಯಕ ಕಾರ್ಯಪಾಲಕ ಅಭಿಯಂತರರ ಗಮನಕ್ಕೆ ತರಲಾಗಿದ್ದರೂ ಸ್ಪಂಧಿಸಿಲ್ಲ. ಈಗ ಮತ್ತೊಮ್ಮೆ ಪತ್ರದ ಮೂಲಕ ಮನವಿ ಮಾಡುತ್ತೇವೆ. ಸ್ಪಂಧಿಸದಿದ್ದರೆ ಜಿಪಂ ಸಿಇಒ ಅವರ ಗಮನಕ್ಕೆ ತಂದು ಶಿಸ್ತು ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಕೋರಗೆರೆ ಪಂಚಾಯ್ತಿ ಅಧ್ಯಕ್ಷ ಬಿ.ಎಸ್.ದಿನೇಶ್ ತಿಳಿಸಿದ್ದಾರೆ.