ವಿದ್ಯುತ್ ಕಂಬ ಉರುಳಿ ಎಮ್ಮೆ ಸಾವು

ಅಫಜಲಪುರ: ಜೂ.9:ತಾಲೂಕಿನ ದೇಸಾಯಿ ಕಲ್ಲೂರ ಗ್ರಾಮದ ಹಣಮಂತ ತಂದೆ ಮುತ್ತಪ್ಪ ಕಲ್ಲೂರ ಇವರಿಗೆ ಸೇರಿದ ಲಕ್ಷಾಂತರ ಬೆಲೆ ಬಾಳುವ ಎಮ್ಮೆ ಅವರ ಹೊಲದಲ್ಲಿ ಮೇಯುವಾಗ ವಿದ್ಯುತ್ ಕಂಬ ಉರುಳಿ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದೆ. ಕೃಷಿ ಕಾರ್ಮಿಕರಾದ ಹಣಮಂತ ಮುತ್ತಪ್ಪ ಕಲ್ಲೂರ ಇವರು ಸಾಲ ಮಾಡಿಕೊಂಡು, ಕುಟುಂಬದ ನಿರ್ವಹಣೆಗಾಗಿ ಎಮ್ಮೆ ಖರೀದಿಸಿದ್ದರು. 1972 ರಲ್ಲಿ ಅಳವಡಿಸಿದ ವಿದ್ಯುತ್ ಕಂಬಗಳು ತುಕ್ಕು ಹಿಡಿದು ಮುರಿದು ಬೀಳುತ್ತಿವೆ. ಇದಕ್ಕೆ ಜೆಸ್ಕಾಂ ಇಲಾಖೆಯ ನಿರ್ಲಕ್ಷ್ಯವೇ ಕಾರಣವಾಗಿದೆ. ಕಲ್ಲೂರ ಗ್ರಾಮ ಸೇರಿದಂತೆ ಇತರೆ ರೈತರ ಹೊಲಗದ್ದೆಗಳಿಗೆ ಹಾದು ಹೋದ ವಿದ್ಯುತ್ ಕಂಬಗಳು ತುಕ್ಕು ಹಿಡಿದಿದ್ದು, ಹೊಸ ವಿದ್ಯುತ್ ಕಂಬಗಳನ್ನಳವಡಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಪತ್ರ ಸಲ್ಲಿಸಿದರೂ ಕೂಡಾ ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಹೀಗಾಗಿ ರೈತರು ಮತ್ತು ನಾಗರೀಕರು ಜೀವ ಕೈಯಲ್ಲಿ ಹಿಡಿದುಕೊಂಡು, ಬದುಕುವಂತಾಗಿದೆ. ಯಾವಾಗ ವಿದ್ಯುತ್ ಕಂಬಗಳು ಉರುಳಿ ಬೀಳುತ್ತವೆಯೋ ತಿಳಿಯದಂತಾಗಿದೆ. ಹೊಸ ವಿದ್ಯುತ್ ಕಂಬಗಳು ಅಳವಡಿಸುವ ಕಾಮಗಾರಿ ಗುತ್ತಿಗೆ ಹಿಡಿದ ಗುತ್ತಿಗೆದಾರರು, ಕೆಲಸ ಮಾಡದೆ ಬಿಲ್ಲು ಎತ್ತಿಕೊಂಡು, ಹೋಗಿದ್ದಾರೆಂದು ತಿಳಿದು ಬಂದಿದೆ. ಈ ಭಾಗದ ರೈತರು ಮತ್ತು ಗ್ರಾಮಸ್ಥರು ಈ ಕುರಿತು ಕೇಳಿದರೆ ಯಾವುದೇ ಉತ್ತರ ಸಿಗುತ್ತಿಲ್ಲ ಎಂದು ಘಟನಾ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಮುಖಂಡ ಸಿದ್ದಯ್ಯ ಆಕಾಶಮಠ ತಮ್ಮ ಆಕ್ರೋಶ ಹೊರಹಾಕಿ, ಈ ಕೂಡಲೆ ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸದಿದ್ದರೆ, ಜೆಸ್ಕಾಂ ಕಛೇರಿ ಎದುರುಗಡೆ ಧರಣಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ವಿದ್ಯುತ್ ಕಂಬ ಉರುಳಿ ಎಮ್ಮೆ ಮೃತಪಟ್ಟಿದ್ದು, ಅದರ ಮಾಲೀಕ ಹಣಮಂತ ತಂದೆ ಮುತ್ತಪ್ಪ ಕಲ್ಲೂರ ಇವರಿಗೆ ಒಂದು ಲಕ್ಷ ರೂಪಾಯಿ ಸರಕಾರ ಮತ್ತು ಇಲಾಖೆ ನೀಡುವಂತೆ ಒತ್ತಾಯಿಸಿದರು. ಘಟನಾ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.