ವಿದ್ಯುತ್, ಆಸ್ತಿ ತೆರಿಗೆ ಧರ ಹೆಚ್ಚಳಕ್ಕೆ ಬಳ್ಳಾರಿ ಜಿಲ್ಲಾ ವಾಣಿಜ್ಯೋಧ್ಯಮ ಸಂಸ್ಥೆ ವಿರೋಧ

ಬಳ್ಳಾರಿ ಜೂ 10 : ರಾಜ್ಯ ಸರ್ಕಾರ ವಿದ್ಯುತ್ ಧರ ಹೆಚ್ಚಳ ಮಾಡಿರುವುದನ್ನು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ವಿರೋಧ ಮಾಡಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಸ್ಥೆಯ ಕಾರ್ಯದರ್ಶಿ ಯಶ್‍ವಂತ್‍ರಾಜ್ ನಾಗಿರೆಡ್ಡಿ. ವಿದ್ಯುತ್ ದರವನ್ನು 1ನೇ ಎಪ್ರಿಲ್ 2021ರಿಂದ ಪೂರ್ವನ್ವಯವಾಗುವಂತೆ ಏರಿಕೆ ಮಾಡಿ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ ನಿಲುವು ಸರಿಯಲ್ಲ. ಕಳೆದ ವರ್ಷ ಮತ್ತು ಈ ವರ್ಷ 2020-2021 ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ರಾಜ್ಯ ಸರಕಾರವೇ ರಾಜ್ಯಾದ್ಯಾಂತ ಎಲ್ಲಾ ರೀತಿಯ ವಾಣಿಜ್ಯ ವ್ಯವಹಾರಗಳನ್ನು ಬಂದ್ ಮಾಡಿ ಕೋವಿಡ್ ರೋಗವನ್ನು ನಿಯಂತ್ರಿಸಲು ಆದೇಶಿಸಿದೆ. ಇದರಿಂದಾಗಿ ರಾಜ್ಯದ ವರ್ತಕರು, ವ್ಯಾಪಾರಸ್ಥರು, ವಾಣಿಜ್ಯೋದ್ಯಮಿಗಳು ಆರ್ಥಿಕ ಹಿಂಜರಿತದಿಂದಾಗಿ ಕಂಗಾಲಾಗಿ ಹೋಗಿದ್ದಾರೆ. ಬಹುತೇಕ ಕೈಗಾರಿಕೆಗಳು ದಿವಾಳಿ ಹಂತಕ್ಕೆ ತಲುಪಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಏಕಪಕ್ಷೀಯವಾಗಿ ತೆಗೆದುಕೊಂಡಿರುವ ಈ ನಿರ್ಧಾರ ಸಮಂಜಸವಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ಭೂಪರಿವರ್ತನಾ ನಿಯಮವೇ ಜಟಿಲವಾಗಿದ್ದು ಕೈಗಾರಿಕೆಗಳು ರಾಜ್ಯದಲ್ಲಿ ನೆಲೆ ಊರುವುದೇ ಕಷ್ಠಸಾಧ್ಯವಾದಾಗ ಹಾಲಿ ಇರುವ ಕೈಗಾರಿಕೆಗಳು ಸರಕಾರದ ಇಂತಹ ನಿಲುವಿನಿಂದ ನೆರೆ ರಾಜ್ಯಗಳಿಗೆ ವಲಸೆ ಹೋಗುವುದರಲ್ಲಿ ಸಂದೇಹವಿಲ್ಲ. ಹಾಗೇನಾದರು ಆದರೆ ಸರಕಾರದ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ ಹಣ ಸಂದಾಯವಾಗುವುದು ಎಲ್ಲಿಂದ ಎಂಬುದು ಸರಕಾರಕ್ಕೆ ನಮ್ಮ ಪ್ರಶ್ನೆ.
ಎರಡನೆಯದಾಗಿ ಪೌರಾಡಳಿತ ಕಾಯಿದೆಯ ಪ್ರಕಾರ ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಏರಿಕೆ ಮಾಡುವುದು ಸರಕಾರ ಮಾಡಿರುವ ಕಾನೂನಾಗಿದೆ. ಆದರೆ 2020ರಲ್ಲಿ ಕೋವಿಡ್ ಸಂಕಷ್ಟದ ಸಮಯದಲ್ಲಿ ಶೇ.25% ರಷ್ಟು ಆಸ್ತಿ ತೆರಿಗೆಯನ್ನು ರಾಜ್ಯದ ಜನತೆಯ ವಿರೋಧದ ನಡುವೆಯೂ ಏರಿಕೆ ಮಾಡಿ ವಸೂಲಿ ಮಾಡಿದ್ದಾಗಿದೆ. ಅಲ್ಲದೇ ಈ ವರ್ಷ ಕೋವಿಡ್ ಎರಡನೇ ಅಲೆಯ ಪರಿಣಾಮ ಜನತೆಯ ಮೇಲೆ ತೀವ್ರವಾಗಿ ನೋವಿನಲ್ಲಿರುವಾಗ ಪುನಃ 2021-22ನೇ ಸಾಲಿನ ಆಸ್ತಿ ತೆರಿಗೆಯನ್ನು ಶೇ75-400 % ಏರಿಕೆ ಮಾಡಿ ಕಟ್ಟಡದ ಅಕ್ಕ ಪಕ್ಕವಿರುವ ಖಾಲಿ ಜಾಗದ ಮೇಲೂ ತೆರಿಗೆ ಪಾವತಿಸಲು ಏಕಪಕ್ಷೀಯವಾಗ ನಿರ್ಧಾರ ತೆಗೆದುಕೊಂಡು ಆದೇಶಿಸಿದೆ.
ದೊಡ್ಡ-ದೊಡ್ಡ ನಗರಗಳಲ್ಲಿ ಕಟ್ಟಡದ ಸುತ್ತ-ಮುತ್ತ ಖಾಲಿ ಜಾಗ ಹೆಚ್ಚಾಗಿ ಇರುವುದಿಲ್ಲ. ಆದರೆ ಜಿಲ್ಲಾ ಮಟ್ಟದಲ್ಲಿ ಕಟ್ಟಡದ ಸುತ್ತ ಮುತ್ತ ವಿಶಾಲ ಖಾಲಿ ಜಾಗವಿದ್ದು ಅಂತಹ ಖಾಲಿ ಜಾಗದ ಮೇಲೂ ತೆರಿಗೆ ವಿಧಿಸಿದರೆ ತೆರಿಗೆ ಮೊತ್ತವನ್ನು ಭರಿಸುವುದು ಕಷ್ಠ ಸಾಧ್ಯವಾಗುತ್ತದೆ. ನೆರೆಯ ರಾಜ್ಯವಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಪ್ರಸ್ತುತ ವರ್ಷದ ತೆರಿಗೆಯಲ್ಲಿ ಶೇ.50% ರಷ್ಟು ರಿಯಾಯತಿ ನೀಡಿ ಜನತೆಗೆ ಸಹಕರಿಸಿದರೆ ಗುಜರಾತ ರಾಜ್ಯದಲ್ಲಿ ಬಹುತೇಕ ಎಲ್ಲಾ ತೆರಿಗೆಗಳನ್ನು ಮನ್ನಾ ಮಾಡಿದೆ. ಇದೇ ರೀತಿ ನಮ್ಮ ರಾಜ್ಯದಲ್ಲಿಯೂ ಈ ವರ್ಷ ಸಾಧ್ಯವಾದರೆ ಗುಜರಾತ್ ಮಾದರಿಯಲ್ಲಿ ತೆರಿಗೆಗಳನ್ನು ಮನ್ನಾ ಮಾಡಿ ಅಥವಾ ಶೇ50% ರ ರಿಯಾಯಿತಿಯನ್ನು ನೀಡಿ ಇಲ್ಲವಾದಲ್ಲಿ ಕಡೆಯ ಪಕ್ಷ ಕಳೆದ ವರ್ಷದ ತೆರಿಗೆ ಪದ್ದತಿಯನ್ನೇ ಮುಂದುವರಿಸಿಕೊಂಡು ರಾಜ್ಯದ ವರ್ತಕರು ಮತ್ತು ವಾಣಿಜ್ಯೋದ್ಯಮಿಗಳಿಗೆ ಸಹಕರಿಸಬೇಕೆಂಬುದು ಸರಕಾರಕ್ಕೆ ಮನವಿ ಮಾಡಿದ್ದಾರೆ.
ಕೆಲವು ತಿಂಗಳವರೆಗೆ ಆದರೂ ಸರಕಾರದ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿಕೊಂಡು ಇತರೆ ಮಾರ್ಗದಲ್ಲಿ ಆರ್ಥಿಕ ಸಂಪನ್ಮೂಲವನ್ನು ಕ್ರೋಡಿಕರಿಸಬೇಕೆಂಬುದು. ಕೋವಿಡ್ ಪಿಡುಗು ರಾಜ್ಯದಲ್ಲಿ ಇಳಿಕೆ ಪ್ರಮಾಣದಲ್ಲಿ ಸಾಗುತ್ತಿದ್ದು, ಆದಷ್ಟು ಬೇಗನೆ ಹಂತ-ಹಂತವಾಗಿ ಎಲ್ಲಾ ರೀತಿಯ ವ್ಯಾಪಾರ ವಹಿವಾಟಿಗೆ ಮುಕ್ತ ಅವಕಾಶ ಮಾಡಿಕೊಡಬೇಕು, ಈ ಹಣಕಾಸು ವರ್ಷದಲ್ಲಿ ಹೆಚ್ಚುವರಿಯಾಗಿ ಯಾವುದೇ ತೆರಿಗೆಗಳನ್ನು ವರ್ತಕರು, ವ್ಯಾಪಾರಸ್ಥರು, ವಾಣಿಜ್ಯೋದ್ಯಮಿಗಳು ಮತ್ತು ಸಾಮಾನ್ಯ ಜನತೆಯ ಮೇಲೆ ಹಾಕದೆ. ಕಳೆದ ವರ್ಷದ ತೆರಿಗೆ ಪದ್ದತಿಯನ್ನು ಚಾಲ್ತಿಯಲ್ಲಿ ತಂದು ಸಂಕಷ್ಟದಿಂದ ಹೊರಬರಲು ಸಹಕರಿಸಬೇಕು ಎಂದು ಕೋರಿದ್ದಾರೆ.