ವಿದ್ಯುತ್‌ ತಂತಿ ಸ್ಪರ್ಶಿಸಿ ಉದ್ಯಮಿ ಮೃತ್ಯು

ಪುತ್ತೂರು, ಡಿ.೨೬- ಅಲುಮಿನಿಯಂ ಕೊಕ್ಕೆಯ ಸಹಾಯದಿಂದ ಅಡಿಕೆ ಮರದಿಂದ ಅಡಿಕೆ ಕೊಯ್ಯುವಾಗ ಅದು ವಿದ್ಯುತ್ ತಂತಿಗೆ ತಗುಲಿ ಉದ್ಯಮಿಯೊಬ್ಬರು ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಎಂಬಲ್ಲಿ ನಿನ್ನೆ ಬೆಳಗ್ಗೆ ನಡೆದಿದೆ.

ಅಜ್ಜಿಕಲ್ಲು ನಿವಾಸಿ ಬಾಬು ಪೂಜಾರಿಯವರ ಪುತ್ರ ರವೀಂದ್ರ ಪೂಜಾರಿ (36 ) ಮೃತಪಟ್ಟ ವ್ಯಕ್ತಿ. ಮಂಗಳೂರಿನ ಉದ್ಯಮ ಸಂಸ್ಥೆ ನಡೆಸುತ್ತಿರುವ ರವೀಂದ್ರ ಅವರು ಕ್ರಿಸ್‌ಮಸ್ ರಜೆಯ ನಿಮಿತ್ತ ಮನೆಗೆ ಬಂದಿದ್ದು, ತಮ್ಮ ಮನೆ ಸುತ್ತ 10 ಅಡಿಕೆ ಗಿಡ ನೆಟ್ಟಿದ್ದು ಅದರಲ್ಲಿರುವ ಅಡಿಕೆ ಕೊಯ್ಲು ಮಾಡುವ ಉದ್ದೇಶದಿಂದ ಅಲುಮಿನಿಯಂ ಕೊಕ್ಕೆಯ ಮೂಲಕ ಅಡಿಕೆ ತೆಗೆಯುತ್ತಿದ್ದಾಗ ಕೊಕ್ಕೆಯೂ ಎಚ್‌ಟಿ ವಿದ್ಯುತ್ ತಂತಿಗೆ ತಗುಲಿದ್ದು ಅದರಿಂದ ರವಿಂದ್ರರವರಿಗೆ ವಿದ್ಯುತ್ ತಗಲಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಪುತ್ತೂರು ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ. ಮೃತರು ಶಿಕ್ಷಕಿಯಾಗಿರುವ ಪತ್ನಿ ಒಂದು ವರ್ಷದ ಮಗು ಹಾಗೂ ಸಹೋದರ ಪುತ್ತೂರು ಟ್ರಾಫಿಕ್ ಪೊಲೀಸ್ ಸಿಬಂದಿ ಚಂದ್ರಶೇಖರ್ ಎಂಬವರನ್ನು ಅಗಲಿದ್ದಾರೆ.