ವಿದ್ಯುತ್‌ಚಾಲಿತ ವಾಹನಗಳಿಗೆ ಆದ್ಯತೆ : ಲಕ್ಷ್ಮಣ ಸವದಿ


ಬೆಂಗಳೂರು, ಜ. ೭- ಪರಿಸರ ಮಾಲಿನ್ಯವನ್ನು ಕಾಪಾಡುವ ನಿಟ್ಟಿನಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಸರ್ಕಾರ ಹೆಚ್ಚು ಆದ್ಯತೆ ನೀಡಿದೆ. ರಾಜ್ಯ
ರಸ್ತೆ ಸಾರಿಗೆ ಮತ್ತು ಬಿಎಂಟಿಸಿ ವಿದ್ಯುತ್ ಚಾಲಿತ ಬಸ್‌ಗಳನ್ನು ಬಳಸಲು ಉದ್ದೇಶಿಸಲಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣಸವದಿ ಹೇಳಿದರು.
ನಗರದಲ್ಲಿಂದು ವಿದ್ಯುತ್ ಚಾಲಿತ ಆಟೋದ ಪರೀಕ್ಷಾರ್ಥ ಚಾಲನೆ ನಡೆಸಿ ಮಾತನಾಡಿದ ಅವರು, ವಿದ್ಯುತ್ ಚಾಲಿತ ವಾಹನಗಳ ಬಳಕೆಯಿಂದ ಪರಿಸರ ಮಾಲಿನ್ಯ ತಗ್ಗಿಸಬಹುದು ಎಂದರು. ಬಿಎಂಟಿಸಿ ಮತ್ತು ರಸ್ತೆ ಸಾರಿಗೆ ಸಂಸ್ಥೆಗಳಲ್ಲೂ ವಿದ್ಯುತ್ ಚಾಲಿತ ಬಸ್‌ಗಳನ್ನು ಖರೀದಿಸಲು ಮುಂದಾಗಿದ್ದೇವೆ. ಆರಂಭದಲ್ಲಿ ಬೆಂಗಳೂರು ನಗರದಲ್ಲಿ ಈ ವಿದ್ಯುತ್ ಚಾಲಿತ ಬಸ್‌ಗಳ ಕಾರ್ಯಾಚರಣೆಯನ್ನು ಆರಂಭಿಸಲಾಗುವುದು ಎಂದರು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಹಳೆಯ ಬಸ್‌ಗಳನ್ನು ಗುಜರಿಗೆ ಹಾಕಿ ಹೊಸ ಬಸ್‌ಗಳನ್ನು ಖರೀದಿಸುವುದು ಸ್ವಾಭಾವಿಕ ಪ್ರಕ್ರಿಯೆ. ಬಸ್‌ಗಳು ಹಳೆಯದಾದಾಗ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಒದಗಿಸಲು ಹೊಸ ಬಸ್ ಖರೀದಿ ಮಾಡಲೇಬೇಕಾಗುತ್ತದೆ. ಅದರಂತೆ ಈಗಲೂ ಹೊಸ
ಬಸ್ ಖರೀದಿಗೆ ಆಡಳಿತಾತ್ಮಕತೀರ್ಮಾನಗಳನ್ನು ಕೈಗೊಳ್ಳಬೇಕಾ ಗುತ್ತದೆ ಎಂದರು.
ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಸಾಲ ಮಾಡಿ ಬಸ್‌ಗಳನ್ನು ಖರೀದಿಸಲಾಗುತ್ತಿದೆ ಎಂಬ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಯಾರೇ ಆಗಲಿ ವಾಹನಗಳನ್ನು ಖರೀದಿಸುವಾಗ ಸಾಲ ಮಾಡಿ ನಂತರ ತೀರಿಸುತ್ತಾರೆ. ಅದರಂತೆ ಸರ್ಕಾರದ ಸಂಸ್ಥೆಗಳು ವಾಹನಗಳನ್ನು ಖರೀದಿಸುವಾಗ ಸಾಲ ಮಾಡುತ್ತವೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಅವರು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸ್ಪಷ್ಟಪಡಿಸಿದರು.