ವಿದ್ಯುತ್‍ದರ ಏರಿಕೆ ವಿರೋಧಿಸಿ ವ್ಯಾಪಾರ ವಹಿವಾಟು ಬಂದ್

ಕಲಬುರಗಿ,ಜೂ 22: ವಿದ್ಯುತ್ ದರ ಏರಿಕೆ ವಿರೋಧಿಸಿ ರಾಜ್ಯಾದ್ಯಂತ ಇಂದು ಎಲ್ಲ ವಾಣಿಜ್ಯೋದ್ಯಮ ಸಂಸ್ಥೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಮತ್ತು ಕೈಗಾರಿಕೆ ಸಂಸ್ಥೆ ನೀಡಿದ ಕಲಬುರಗಿ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದÀ ಗಂಜ್ ಪ್ರದೇಶ,ಸೂಪರ್ ಮಾರುಕಟ್ಟೆ,ಕಿರಾಣಾ ಬಜಾರ್,ಬಟ್ಟೆ ಬಜಾರ್,ಸರಾಫ್ ಬಜಾರ್,ಭಾಂಡೆ ಬಜಾರ್ ಸೇರಿದಂತೆ ಅನೇಕ ಕಡೆ ಅಂಗಡಿ ಮುಂಗಟ್ಟು ,ಕೈಗಾರಿಕೆ ಘಟಕಗಳ ಬಾಗಿಲು ಬಂದ್ ಮಾಡಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲಾಯಿತು.ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಮಾರುಕಟ್ಟೆ ಪ್ರದೇಶ ಬಿಕೋ ಎನ್ನುತ್ತಿತ್ತು.
ಬಂದ್‍ಗೆ ದಾಲ್ ಮಿಲ್ ಅಸೋಸಿಯೇಷನ್,ಗಂಜ್ ಅಸೋಸಿಯೇಷನ್ ಸರಾಫ್ ಬಜಾರ್ ವರ್ತಕರ ಸಂಘ ಸೇರಿದಂತೆ ಹಲವು ವಾಣಿಜ್ಯ ಸಂಸ್ಥೆಗಳು,ಜನಪರ ಸಂಘಟನೆಗಳು ಬೆಂಬಲ ನೀಡಿವೆ.
ಬೆಳಿಗ್ಗೆ ನಗರದ ಚೌಕ ಠಾಣೆ ವೃತ್ತದಿಂದ ವ್ಯಾಪಾರಿಗಳು,ಉದ್ಯಮಿಗಳು ಸಾರ್ವಜನಿಕರು ಸೇರಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಮತ್ತು ಜೆಸ್ಕಾಂ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.ವಿದ್ಯುತ್ ದರ ಏರಿಕೆಯಿಂದ ಸಾರ್ವಜನಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ.ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.ಸಣ್ಣ
ಕೈಗಾರಿಕೆಗಳು ಮುಚ್ಚುವ ಹಂತ ತಲುಪಿವೆ.ಆದ್ದರಿಂದ ವಿದ್ಯುತ್ ದರ ಏರಿಕೆ,ಮತ್ತು ಎಫ್‍ಪಿಪಿಸಿಎ ದರ ವಾಪಸ್ಸು ಪಡೆಯುವಂತೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಪಾಟೀಲ,ಗೌರವ ಕಾರ್ಯದರ್ಶಿ ಮಂಜುನಾಥ ಜೇವರಗಿ ,ಉದ್ಯಮಿಗಳಾದ ರಾಘವೇಂದ್ರ ಮೈಲಾಪುರ,ಶರಣಬಸಪ್ಪ ಮಾಚಟ್ಟಿ,ಜೆ.ಡಿ ಅಣಕಲ್, ಉಮಾಕಾಂತ ನಿಗ್ಗುಡಗಿ,ಶರಣು ನಿಗ್ಗುಡಗಿ,ಮನೀಷ ಜಾಜು,ರಾಧಾಕೃಷ್ಣ ರಘೋಜಿ,ಓಂಜಿ ಲಾಹೋಟಿ,ಶರಣು ಪಪ್ಪಾ,ಶಂಕರ ಮಾಲಿ ಪಾಟೀಲ ಅವರು ಸೇರಿದಂತೆ ಅನೇಕ ಗಣ್ಯ ಉದ್ಯಮಿಗಳು ,ವ್ಯಾಪಾರಸ್ಥರು ಪಾಲ್ಗೊಂಡರು.