ವಿದ್ಯಾ ವಿಕಾಸ ಸೇವೆ ಪವಿತ್ರ ಕೈಂಕರ್ಯ

ಧಾರವಾಡ,ಮಾ12 : ಅಕ್ಷರ ಸಂಸ್ಕøತಿಯನ್ನು ಉಳಿಸಿ ಬೆಳೆಸುವಲ್ಲಿ ಅಗತ್ಯವಾಗಿರುವ ವಿದ್ಯಾ ವಿಕಾಸ ಸೇವೆಯ ಪವಿತ್ರ ಕೈಂಕರ್ಯದಲ್ಲಿ ಎಲ್ಲರೂ ಪಾಲ್ಗೊಂಡು ಪ್ರೋತ್ಸಾಹಿಸಬೇಕೆಂದು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ನುಡಿದರು.
ಅವರು ತಮ್ಮ ಶ್ರೀಮಠದ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೀಮತಿ ಸುಶಿಲಾತಾಯಿ ಅಜ್ಜಯ್ಯ ಹಿರೇಮಠ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಿಕ್ಷಣ ಕ್ಷೇತ್ರದಲ್ಲಿ ವ್ಯಾಪಕ ಬದಲಾವಣೆಗಳನ್ನು ತಂದಿರುವ ಭಾರತವು ಎಲ್ಲ ಕ್ಷೇತ್ರಗಳಲ್ಲಿ ಸಾಧನೆಯ ಮೈಲುಗಲ್ಲುಗಳನ್ನು ಸ್ಥಾಪಿಸುವಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಅನೇಕ ಕ್ರಾಂತಿಕಾರಿ ಬದಲಾವಣೆಗಳನ್ನು ತರಲು ಹಂಬಲಿಸುತ್ತಿದ್ದು, ಪ್ರಸ್ತುತ ಕೇಂದ್ರ ಸರಕಾರ ಜಾರಿಗೆ ತಂದಿರುವ 15 ವರ್ಷಗಳ ಕಲಿಕೆಯ ರಾಷ್ಟ್ರೀಯ ಶಿಕ್ಷಣ ನೀತಿಯೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಲೇಖಕ ಡಾ. ಗುರುಮೂರ್ತಿ ಯರಗಂಬಳಿಮಠ ಮಾತನಾಡಿ, ಹಳ್ಳಗಾಡಿನ ಮಕ್ಕಳಿಗೂ ಕಲಿಕೆಯ ಅವಕಾಶಗಳು ಅಧಿಕಗೊಂಡು ನಿಖರ ನೆಲೆಯ ಕ್ರಿಯಾಪ್ರೇರಕ ಬೋಧನೆ ಶಾಲಾ ತರಗತಿಗಳಲ್ಲಿ ಪ್ರಾಪ್ತವಾಗಬೇಕಾಗಿದೆ. ಕೇವಲ ಶಹರ ಪ್ರದೇಶಗಳಿಗೆ ಮಾತ್ರ ಸೀಮಿತಗೊಂಡಿದ್ದ ಕಾನ್ವೆಂಟ್ ಮಾದರಿ ಕನ್ನಡ ಮಾಧ್ಯಮದ ಖಾಸಗಿ ಶಾಲೆಗಳು ಪ್ರಸ್ತುತ ಗ್ರಾಮೀಣ ಪ್ರದೇಶಗಳಲ್ಲಿಯೂ ಬೆಳೆಯುತ್ತಿರುವುದು ‘ಎಲ್ಲರಿಗೂ ಶಿಕ್ಷಣ’ ಎಂಬುದಕ್ಕೆ ಪುಷ್ಟಿ ಒದಗಿಸಿದಂತಾಗಿದೆ ಎಂದರು.
ಶ್ರೀಗುರುಶಾಂತಲಿಂಗ ಶಿವಾಚಾರ್ಯ ಶಿಕ್ಷಣ ಪ್ರತಿಷ್ಠಾನದ ನಿರ್ದೇಶಕರುಗಳಾದ ಬಿ.ಸಿ. ಕೊಳ್ಳಿ, ವ್ಹಿ. ಬಿ. ಕೆಂಚನಗೌಡರ ಹಾಗೂ ಸೋಮಲಿಂಗಯ್ಯ ಗುಡ್ಡದಮಠ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಶಿಕ್ಷಕ ಎಂ.ಎನ್. ಆಲದಕಟ್ಟಿ ಹಾಗೂ ಶಿಕ್ಷಕಿ ಮಹೇಶ್ವರಿ ಚಿಕ್ಕಮಠ ಮಾತನಾಡಿದರು. ವಿಜಯಕುಮಾರ ನಂದಿ ಸ್ವಾಗತಿಸಿದನು. ಮಧುಮತಿ ಉಂಡೋಡಿ ನಿರೂಪಿಸಿದಳು. ಪಲ್ಲವಿ ಹೆಬ್ಬಾಳ ವಂದಿಸಿದಳು. ಮಲ್ಲಪ್ಪ ಯಡಳ್ಳಿಗೆ ಆದರ್ಶ ವಿದ್ಯಾರ್ಥಿ ಮತ್ತು ಅಭಿನಯ ಭೋವಿಗೆ ಆದರ್ಶ ವಿದ್ಯಾರ್ಥಿನಿ ಪ್ರಶಸ್ತಿ ನೀಡಲಾಯಿತು. ಖುಷಿ ವಿಠ್ಠಪ್ಪನವರ, ಆದ್ಯಾ ಕಡ್ಲೆಪ್ಪನವರ, ಪ್ರೀತಿ ಪೂಜಾರ, ಪವಿತ್ರಾ ಶಿರಕೋಳ, ವರ್ಷಾ ಬಡಿಗೇರ, ನಾಗರತ್ನಾ ಹಾಲಪ್ಪನವರ ಮುಂತಾದವರು ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಶ್ರೀಮತಿ ಸುಶಿಲಾತಾಯಿ ಅಜ್ಜಯ್ಯ ಹಿರೇಮಠ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ-ಶಿಕ್ಷಕಿಯರು ಇದ್ದರು.