ವಿದ್ಯಾವೇತನ ಯೋಜನೆಯಡಿ 250 ವಿದ್ಯಾರ್ಥಿಗಳು ಆಯ್ಕೆ

ಭಾಲ್ಕಿ:ಮಾ.9: ಇಲ್ಲಿಯ ಚನ್ನಬಸವೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ 2023-24ನೇ ಸಾಲಿನ ವಿದ್ಯಾವೇತನ ಯೋಜನೆಗೆ ಆಯ್ಕೆಯಾದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಜರುಗಿತು. ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಎರಡು ವರ್ಷ ಪಿಯು ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ಸಂಸ್ಥೆ ವತಿಯಿಂದ ಇದೇ ಮೊದಲ ಬಾರಿಗೆ ವಿದ್ಯಾವೇತನ ಪ್ರವೇಶ ಪರೀಕ್ಷೆ ಏರ್ಪಡಿಸಲಾಗಿತ್ತು.
ಗ್ರಾಮೀಣ ಭಾಗದ 250 ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ವಿದ್ಯಾವೇತನ ಯೋಜನೆಯಡಿ ಶಿಕ್ಷಣ ಪಡೆಯುವ ಅರ್ಹತೆ ಪಡೆದು ಕೊಂಡಿದ್ದಾರೆ. ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕಾಲೇಜಿನಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಾಗರ ಖಂಡ್ರೆ ಸನ್ಮಾನಿಸಿದರು.
ನಂತರ ಮಾತನಾಡಿದ ಅವರು, ಗ್ರಾಮೀಣ ಭಾಗದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕಲ್ಪಿಸಲು ವಿದ್ಯಾವೇತನ ಯೋಜನೆ ಸಹಕಾರಿಯಾಗಿದೆ. ಇದೇ ಮೊದಲ ಬಾರಿಗೆ ವಿದ್ಯಾವೇತನ ಯೋಜನೆ ಪರಿಚಯಿಸಿದ್ದು ಜಿಲ್ಲೆಯ ವಿವಿಧೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಪ್ರವೇಶ ಪರೀಕ್ಷೆಗೆ ಸುಮಾರು 2 ಸಾವಿರ ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದರು. ಅದರಲ್ಲಿ 1586 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಉತ್ತಮ ಅಂಕ ಪಡೆದ 250 ವಿದ್ಯಾರ್ಥಿಗಳನ್ನು ವಿದ್ಯಾವೇತನ ಯೋಜನೆಗೆ ಆಯ್ಕೆ ಮಾಡಲಾಗಿದೆ. ಹೆಚ್ಚು ಅಂಕ ಪಡೆದ 30 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, 70 ವಿದ್ಯಾರ್ಥಿಗಳಿಗೆ ಶೇ.75 ರಷ್ಟು ಶುಲ್ಕ ರಿಯಾಯತಿ ಮತ್ತು 150 ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕದಲ್ಲಿ ಶೇ.50 ರಷ್ಟು ರಿಯಾಯತಿ ನೀಡಲಾಗುವುದು ಅರ್ಹ ಎಲ್ಲ ವಿದ್ಯಾರ್ಥಿಗಳು ಯೋಜನೆಯ ಸದುಪಯೋಗ ಪಡೆದು ಉತ್ತಮ ಶಿಕ್ಷಣ ಪಡೆದು ಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಅಂಕುಶ ಢೋಲೆ, ಪ್ರಾಚಾರ್ಯರಾದ ಎಸ್.ಕೆ.ವೈರಾಗೆ, ಮೋಹನ ರೆಡ್ಡಿ ಸೇರಿದಂತೆ ಹಲವರು ಇದ್ದರು. ರಾಜೇಶ್ವರಿ ಪಾಟೀಲ್ ನಿರೂಪಿಸಿದರು. ಬಸವರಾಜ ವಂದಿಸಿದರು.