ವಿದ್ಯಾವಂತರೂ ಹೆಚ್ಚಾಗುತ್ತಿದ್ದರೂ ಸಹ ಅಸ್ಪೃಶ್ಯತೆ ಜೀವಂತವಾಗಿರುವುದು ಬೇಸರ- ನ್ಯಾ. ಸುನಿಲ್ ಹೊಸಮನಿ

ಕೋಲಾರ,ಮಾ.೨೯- ಭಾರತ ದೇಶವು ಮುಂದುವರೆಯುತ್ತಿದ್ದರೂ ಸಹ ಇಂದಿಗೂ ಅಸ್ಪೃಷ್ಯತೆಯನ್ನು ಕಾಣುತ್ತಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ನ್ಯಾಯಾಧೀಶ ಸುನಿಲ್ ಹೊಸಮನಿ ಹೇಳಿದರು.
ಸಮ ಸಮಾಜ ನಿರ್ಮಾಪಕರಿಗಾಗಿ ಅರಿವು ಭಾರತ ವತಿಯಿಂದ ತಾಲೂಕಿನ ಕೂಟೇರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಹಭೋಜನ ಹಾಗೂ ಕೂಟೇರಿ ಕೆ.ವಿ.ನಂಜಾಮರಿ ಅವರಿಗೆ ಗ್ರಾಮರತ್ನ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ವಿದ್ಯಾವಂತರು ಹೆಚ್ಚಾಗುತ್ತಿದ್ದಾರೆ. ಆದರೂ ಸಹ ಇಂದಿಗೂ ಅಸ್ಪೃಶ್ಯತೆ ಜೀವಂತವಾಗಿರುವುದು ನೋವಿನ ಸಂಗತಿ ಎಂದ ಅವರು, ಎಲ್ಲರನ್ನೂ ಸಮಗೊಳಿಸಿದ ಸಂವಿಧಾನವನ್ನು ಪರಿಚಯಿಸಿ ಜೊತೆಗೆ ಇತರೆ ಕಾನೂನುಗಳ ಅರಿವನ್ನು ವಿಸ್ತರಿಸಿದರು. ಶಾಶ್ವತ ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ ಮಾತನಾಡಿ, ಅಸ್ಪೃಶ್ಯತೆಯ ಅವಮಾನವನ್ನು ಕೊನೆಗಾಣಿಸಲು ತಾವೂ ಕೈಜೋಡಿಸುವುದಾಗಿ ಹೇಳಿದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೋಪಿನಾಥ್ ಈ ಬಗೆಯ ಸಹಭೋಜದಿಂದಷ್ಟೇ ಅಸ್ಪೃಶ್ಯತೆ ಸಡಿಲಗೊಳ್ಳಲು ಸಾಧ್ಯವಿಲ್ಲ. ನಮ್ಮ ಮನಸ್ಸುಗಳಲ್ಲಿರುವ ಅಸ್ಪೃಶ್ಯತೆಯನ್ನು ಮೊದಲು ಹೋಗಲಾಡಿಸಬೇಕೆಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಬಿ.ಎಸ್.ವೆಂಕಟಾಚಲಪತಿ ಆಶಯ ನುಡಿಗಳನ್ನಾಡಿದರು.
ಭಾರತ ಅಸ್ಪೃಶ್ಯತೆ ಮಕ್ತ ರಾಷ್ಟ್ರವಾಗಬೇಕು ಎಂದು ಅನೇಕರು ಹೇಳುತ್ತಾರೆ. ಆದರೆ ಹಾಗೆ ಆಗಿಲ್ಲ. ಏಕೆಂದರೆ ಅಸ್ಪೃಶ್ಯತೆ ಹೋಗಬೇಕು ಎಂದು ಹೇಳುವ ಬಹುತೇಕ ಬರಹಗಾರರು ಮತ್ತು ಭಾಷಣಕಾರರು ಅಸ್ಪೃಶ್ಯತೆ ಉಸಿರಾಡುವ ಹಳ್ಳಿಗಳಿಂದ ದೂರ ಉಳಿದಿದ್ದಾರೆ. ನಾವೂ ಅಸ್ಪೃಶ್ಯತೆ ಹೋಗಬೇಕು ಎನ್ನುತ್ತಿದ್ದೇವೆ. ನಗರ-ಪಟ್ಟಣಗಳ ರಂಗಮಂದಿರಗಳಲ್ಲೋ, ಬೀದಿಬದಿಯಲ್ಲೋ ನಿಂತು ಭಾಷಣ ಮಾಡಿದರೆ ಅಥವಾ ಮನೆಯಲ್ಲೋ-ಪಾರ್ಕಲ್ಲೋ ಕುಳಿತು ಬರೆದರೆ ಅದು ಹೋಗುವುದಿಲ್ಲವೆಂದು ತಿಳಿದು ಹಳ್ಳಿಗಳಿಗೆ ಹೋಗುತ್ತಿದ್ದೇವೆ. ಹಳ್ಳಿಗಳ ಎಲ್ಲಾ ಸಮುದಾಯಗಳ ಜನರನ್ನು ಸೇರಿಸಿಕೊಂಡು ಮಾತನಾಡುತ್ತಿದ್ದೇವೆ.
ಇಂದು ಕೋಲಾರ ತಾಲ್ಲೂಕಿನ ಕೂಟೇರಿ ಗ್ರಾಮದಲ್ಲಿ ಒಕ್ಕಲಿಗ ಸಮುದಾಯದ ನಂಜಾಮರಿ ಅವರ ಮನೆಯಲ್ಲಿ ಸಹಬೋಜನ ಏರ್ಪಡಿಸಿದ್ದೆವು. ಅದಕ್ಕಾಗಿ ಹಲವು ದಿನಗಳಿಂದ ಸಿದ್ದತೆ ಮಾಡಿಕೊಂಡಿದ್ದೆವು. ನಂಜಾಮರಿ ಅವರ ಇಡೀ ಕುಟುಂಬ ಈ ಕಾರ್ಯಕ್ರಮವನ್ನು ಒಂದು ಹಬ್ಬದ ರೀತಿಯಲ್ಲಿ ನಡೆಸಿಕೊಟ್ಟರು. ಮನೆಯ ಮಗ ನಾಗರಾಜ್ ಅವರು ರೈತ ಸಂಘದಲ್ಲಿ ಗುರುತಿಸಿಕೊಂಡಿದ್ದರಿಂದ ಅವರು ತಂದೆಯ ತೀರ್ಮಾಣಕ್ಕೆ ಸಹಮತ ತೋರಿಸಿದ್ದು ಮಾತ್ರವಲ್ಲದೆ, ಅವರ ರೈತಸಂಘದ ಮಿತ್ರರನ್ನೂ ಆಹ್ವಾನಿಸಿದ್ದರು.
೫೦ ರಿಂದ ೬೦ ಜನ ಸೇರಬಹುದೆಂಬ ಅಂದಾಜು ಇದ್ದುದರಿಂದ ಅಷ್ಟೂ ಜನಕ್ಕೆ ಬೇಕಾಗುವಷ್ಟು ಅವರೆಕಾಯಿ ತಂದು ಹಿತಿಕಿನ ಬೇಳೆ ಸಾಂಬಾರ್, ಮುದ್ದೆ, ಅಣ್ಣ, ರಸ, ಎರಡು ಪಲ್ಯ, ಅಪ್ಪಳಗಳನ್ನು ಮನೆಯ ಮಹಿಳೆಯರು ಸಿದ್ದಮಾಡಿಕೊಂಡಿದ್ದರು.
ನಾವು ಕೂಟೇರಿಗೆ ಹೋಗುವುದರೊಳಗೆ ಮುನೆ ಮುಂದೆ ಪೆಂಡಾಲ್ ಹಾಕಿದ್ದರು. ವೇದಿಕೆಯೂ ಸಿದ್ಧವಾಗಿತ್ತು. ಮನೆ ಮಂದಿಯೆಲ್ಲ ನಗುಮುಖದಿಂದಲೇ ನಮ್ಮನ್ನು ಆಹ್ವಾನಿಸಿದರು.
ಈ ನೆಲ ಈ ಜಲ ವೆಂಕಟಾಚಲಪತಿ ಮತ್ತು ತಂಡದ ಹಾಡುಗಾರಿಕೆಯೊಂದಿಗೆ ಕಾರ್ಯಕ್ರಮ ಶುರುವಾಯಿತು. ಮದ್ದೇರಿ ಪಿ.ಮುನಿರೆಡ್ಡಿ ಕೆಲವು ಹಾಡುಗಳನ್ನು ಹಾಡುವ ಮೂಲಕ ನೆರೆದಿದದ್ದವರನ್ನು ರಂಜಿಸಿದರು. ಮಂಜುಳ ಕೊಂಡರಾಜನಹಳ್ಳಿ ಎಲ್ಲರನ್ನೂ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ದಲಿತ ನಾಯಕರಾದ ಟಿ.ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ಬದುಕು-ಸಂವಾದ ಸಂಸ್ಥೆಯ ಮಂಜುನಾಥ್ ಸೇರಿದಂತೆ ೬೦-೭೦ ಜನ ಈ ಬದಲಾವಣೆಯ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ನಂಜಾಮರಿ ದಂಪತಿಗಳನ್ನು ಸನ್ಮಾನಿಸಿ ಗ್ರಾಮರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು..