ವಿದ್ಯಾವಂತರಾಗಿ, ಬುದ್ದಿವಂತರಾಗಿ ಅದರ ಜೊತೆಗೆ ಪ್ರಜ್ಞಾವಂತರಾಗಿ: ಹುಲಿಕಲ್ ನಟರಾಜ

ಕಲಬುರಗಿ:ಅ.19: ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ “ವ್ಯಕ್ತಿತ್ವ ವಿಕಸನ” ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಹುಲಿಕಲ್ ನಟರಾಜ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‍ನ ಸಂಸ್ಥಾಪಕ ಅಧ್ಯಕ್ಷರು ಇವರು ಮಾತನಾಡುತ್ತ, ವಿದ್ಯಾರ್ಥಿಗಳು ವಿದ್ಯಾವಂತರಾಗಿ, ಬುದ್ದಿವಂತರಾಗುವುದರೊಂದಿಗೆ ಪ್ರಜ್ಞಾವಂತರಾಗಿ ಬೆಳೆದಾಗ ನಿಮ್ಮ ವ್ಯಕ್ತಿತ್ವ ವಿಕಾಸವಾಗುತ್ತದೆ. ಏಕೆಂದರೆ ನಿಮ್ಮ ಜೊತೆಗೆ ಸಮಾಜ ಬೆಳೆಯಬೇಕು.

ಇಂದಿನ ವಿದ್ಯಾರ್ಥಿ ಯುವ ಸಮೂಹ ಮೊಬೈಲನ್ನು ಹೆಚ್ಚು ಬಳಸುವುದರಿಂದ ಒಂಟಿತನದ ರೂಢಿಯಾಗಿ ಖಿನ್ನತೆಗೆ ಒಳಗಾಗುತ್ತಿದ್ದಾರೆ. “ವಿದ್ಯಾರ್ಥಿ ಜೀವನ ಎಂದರೆ ಬಂಗಾರದ ಜೀವನ” ಎಂಬ ಮಾತು ಅರ್ಥಪೂರ್ಣವಾಗಿಸಬೇಕಾದರೆ ವಿದ್ಯಾರ್ಥಿ ಇದ್ದಾಗಲೇ ಹೆಚ್ಚು ಸಮಯ ಅಧ್ಯಯನದಲ್ಲಿ ತೊಡಗಿ ಜ್ಞಾನ ಸಂಪಾದಿಸಬೇಕು. ವಿದ್ಯಾರ್ಥಿ ಇದ್ದಾಗ ಕೇವಲ ಮನರಂಜನೆಯಲ್ಲಿ ತೊಡಗಿದರೆ ಮುಂದಿನ ಇಡೀ ಜೀವನ ಕಷ್ಟದಿಂದ ಕೂಡಿರುತ್ತದೆ. ಆದ್ದರಿಂದ ಯುವ ವಯಸ್ಸಿನಲ್ಲಿಯೇ ಪರಿಶ್ರಮ ಪಟ್ಟರೆ ಮುಂದಿನ ಬದುಕು ಬಂಗಾರವಾಗುತ್ತದೆ. ಮೌಢ್ಯತೆ, ವಾಮಾಚಾರ, ಮಾಟ-ಮಂತ್ರಗಳನ್ನು ಧಿಕ್ಕರಿಸಬೇಕು ಅದರಿಂದ ಮೋಸಕ್ಕೊಳಗಾಗಬಾರದು. ನೂರಾರು ದೇವರನ್ನು ಪೂಜಿಸುವುದಕ್ಕಿಂತ ಜನ್ಮಕೊಟ್ಟ ತಂದೆ-ತಾಯಿಗೆ ಗೌರವ ಬರುವ ಹಾಗೆ ನಡೆದುಕೊಳ್ಳಬೇಕು. ಆದರ್ಶ ಮಕ್ಕಳಾಗಬೇಕು. ಮಕ್ಕಳ ಆದರ್ಶದ ಬದುಕಿಗೆ ಶಿಕ್ಷಕರು, ಪಾಲಕರು ಉತ್ತಮ ಮಾರ್ಗದರ್ಶಕರಾಗಿದ್ದಾರೆ. ಜಂಕ್‍ಫುಡ್ ತಿನ್ನಬಾರದು. ಹಸಿ ತರಕಾರಿ ಮೊಳಕೆ ಕಾಳುಗಳಂತಹ ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯವಾಗಿರಬೇಕು. ಭಯ ಪಡದೆ ಒತ್ತಡಕ್ಕೆ ಒಳಗಾಗದೆ, ಆತಂಕಪಡದೆ ದೈಹಿಕವಾಗಿ ಮಾನಸಿಕವಾಗಿ ಸದೃಢಹೊಂದಿ ಸರಿಯಾದ ಮಾರ್ಗದಲ್ಲಿ ನಡೆದರೆ ಅಸಾಮಾನ್ಯ ವ್ಯಕ್ತಿಯಾಗಿ ಹೊರಹೊಮ್ಮಲು ಶ್ರೇಷ್ಠ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರೊಂದಿಗೆ ಮಾತನಾಡಿದ್ದು, ಅವರಿಂದ ಪ್ರಶಸ್ತಿ ಪಡೆದಿದ್ದನ್ನು ತಿಳಿಸಿದರು.

ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಚನ್ನಾರಡ್ಡಿ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ದೆವ್ವ-ಭೂತ, ಭಾನಾಮತಿ, ವಾಮಾಚಾರವನ್ನು ನಂಬದೆ ಮೌಢ್ಯತೆಯನ್ನು ಮೀರಿ ಕಷ್ಟಪಟ್ಟು ಓದಿ ಮುಂದೆ ಬರಬೇಕು. ಆತ್ಮ ವಿಶ್ವಾಸದಿಂದ ಓದಬೇಕು. ನಮ್ಮ ಶ್ರೇಷ್ಠ ಸಾಧಕರನ್ನು ಆದರ್ಶ ವ್ಯಕ್ತಿಗಳಾಗಿಸಿರಿಕೊಂಡು ಕಠಿಣ ಪರಿಶ್ರಮ, ನಿರಂತರ ಪ್ರಯತ್ನ, ಗುರಿ ಮುಟ್ಟುವ ಛಲವನ್ನು ಹೊಂದಿ ಸಾಧನೆ ಮಾಡಬೇಕು. ಇದರಿಂದ ಮಾತ್ರ ಬದುಕು ಬದಲಾಗುತ್ತದೆ. ಬದುಕು ಸುಂದರವಾಗುತ್ತದೆ. ಭವಿಷ್ಯ ಉಜ್ವಲವಾಗುತ್ತದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯಪ್ರವೃತ್ತರಾಗಬೇಕೆಂದು ಪ್ರೇರೇಪಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಗೀತಾ ಚನ್ನಾರಡ್ಡಿ ಪಾಟೀಲ, ಶ್ರೀಮತಿ ದೇವಕಿ ಹುಲಿಕಲ್ ನಟರಾಜ, ಶ್ರೀ ರವೀಂದ್ರ ಶಾಬಾದಿ, ಡಾ. ಶಿವರಂಜನ್ ಸತ್ಯಂಪೇಟ್, ಸಂಸ್ಥೆಯ ಮುಖ್ಯ ಶೈಕ್ಷಣಿಕ ನಿರ್ದೇಶಕರಾದ ಶ್ರೀ ಅಭಿಷೇಕ್ ಚನ್ನಾರಡ್ಡಿ ಪಾಟೀಲ, ಶ್ರೀ ಎಂ.ಸಿ.ಕಿರೇದಳ್ಳಿ ಪ್ರಾಚಾರ್ಯರು, ಶ್ರೀಮತಿ ವಿನುತಾ ಆರ್.ಬಿ., ಶ್ರೀ ಪ್ರಶಾಂತ ಕುಲಕರ್ಣಿ, ಶ್ರೀ ಪ್ರಭುಗೌಡ ಸಿದ್ಧಾರೆಡ್ಡಿ, ಶ್ರೀ ಕರುಣೇಶ್ ಹಿರೇಮಠ, ಶ್ರೀ ಗುರುರಾಜ ಕುಲಕರ್ಣಿ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.