ವಿದ್ಯಾವಂತರನ್ನು ಆಯ್ಕೆ ಮಾಡಿ ಪ್ರಜ್ಞಾವಂತಿಕೆ ಮೆರೆದ ವಿಜಯನಗರ ಜಿಲ್ಲೆಯ ಮತದಾರ.

ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ: ವಿಜಯನಗರ ಜಿಲ್ಲೆಯಾದ ಬಳಿಕ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ವಿದ್ಯಾವಂತವರನ್ನು ಆಯ್ಕೆ ಮಾಡುವ ಮೂಲಕ ಮತದಾರರು ತಮ್ಮ ಪ್ರಜ್ಞಾವಂತಿಕೆಯನ್ನು ಮೆರೆದಿದ್ದಾರೆ.
ಹೌದು! ಡಾಕ್ಟರ್, ಇಂಜಿನಿಯರ್, ಪದವಿ ಹಾಗೂ ಪಿಯುಸಿ ವಿದ್ಯಾರ್ಹತೆ ಹೊಂದಿರುವ ಶಾಸಕರನ್ನು ಜನರು ಆಯ್ಕೆ ಮಾಡುವ ಮೂಲಕ ವಿಜಯನಗರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯನ್ನು  ಸಮನ್ವಯತೆಯ ಕಾರ್ಯವನ್ನು ನೋಡುತ್ತಿದ್ದಾರೆ.
ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಆಯ್ಕೆಯಾಗಿರುವ ಮೂವರು ಮೊದಲ ಬಾರಿ ಮತ್ತು ಇಬ್ಬರು ಎರಡನೇ ಬಾರಿ ಗೆದ್ದಿರುವ ಶಾಸಕರು. ಇದರಲ್ಲಿ ಮೂವರು ಪದವಿಧರರು ಇಬ್ಬರು ಪಿಯು ಶಿಕ್ಷಣ ಪಡೆದವರು. ಪದವಿ ಶೈಕ್ಷಣಿಕ ಅರ್ಹತೆ ಹೊಂದಿರುವ ನೂತನ ಶಾಸಕರು ಹೊಸ ಜಿಲ್ಲೆಯಲ್ಲಿ ಆಯ್ಕೆಯಾಗಿದ್ದು, ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಶುರುವಾಗುವ ನಿರೀಕ್ಷೆ ರ್ಸಾಜನಿಕರಲ್ಲಿ ಚರ್ಚೆಯಾಗುತ್ತಿದೆ.
ಹಡಗಲಿ ಶಾಸಕ:
ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದ ಕೃಷ್ಣಾನಾಯ್ಕ ಈಗ ಹಡಗಲಿಯ ನೂತನ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮಲ್ಲಿಗೆನಾಡು ಹೂವಿನಹಡಗಲಿ ಕ್ಷೇತ್ರದಿಂದ ಅಚ್ಚರಿ ರೀತಿಯಲ್ಲಿ ಮೊದಲ ಬಾರಿಗೆ ಮಾಜಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಅವರನ್ನು ಮಣಿಸಿ ಶಾಸಕರಾಗಿರುವ ಕೃಷ್ಣಾನಾಯ್ಕ ಅವರು, ಬೆಂಗಳೂರಿನ ಪಿಇಎಸ್‍ಐಟಿ ಕಾಲೇಜಿಲ್ಲಿ ಮೆಕಾನಿಕಲ್ ಇಂಜಿಯರಿಂಗ್ (ಬಿಇ) ಪದವಿ ಪಡೆದಿದ್ದಾರೆ.  ಹಡಗಲಿ ತಾಲೂಕಿನ ಕೊಯಿಲಾರಗಟ್ಟಿ ತಾಂಡಾ ನಿವಾಸಿಯಾಗಿರುವ ಇವರು ಇದಕ್ಕೂ ಮೊದಲು ಕೆಲಕಾಲ ಇಟಲಿಯಲ್ಲಿ ಕೆಲಸ ನಿರ್ವಹಿಸಿ ಬಂದಿದ್ದರು. ಆ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ಬೆಂಗಳೂರಿನಲ್ಲಿ ಸ್ವಂತ ಸಾಫ್ಟ್‍ವೇರ್ ಕಂಪನಿ ನಡೆಸುತ್ತಿದ್ದರು. ಬಿಜೆಪಿ ಟಿಕೆಟ್ ಪಡೆದಿದ್ದು ಸೇರಿದಂತೆ ಅದೃಷ್ಟ ಖುಲಾಯಿಸಿದ್ದು ಮೊದಲ ಸಲ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ.
ಹಗರಿಬೊಮ್ಮನಹಳ್ಳಿ ಶಾಸಕ:
ಹಗರಿಬೊಮ್ಮನಹಳ್ಳಿ ನೂತನ ಶಾಸಕ ನೇಮರಾಜನಾಯ್ಕ ಅವರು 2008ರಲ್ಲಿ ಮೊದಲಬಾರಿ ಬಿಜೆಪಿ ಪಕ್ಷದಿಂದ ಶಾಸಕರಾಗಿದ್ದರು. ಆ ಬಳಿಕ 2013 ಮತ್ತು 2018ರಲ್ಲಿ ಭೀಮಾನಾಯ್ಕ ವಿರುದ್ಧ ಸೋತಿದ್ದರು. 2013ರಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ಭೀಮಾನಾಯ್ಕ ವಿರುದ್ಧ ಕೇವಲ 125 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಇದೀಗ ತಮ್ಮನ್ನು ಸೋಲಿಸಿದ್ದ ಜೆಡಿಎಸ್ ಪಕ್ಷದ ಟಿಕೆಟ್ ಪಡೆದು ಗೆದ್ದು ಬೀಗಿರುವ ನೇಮರಾಜನಾಯ್ಕ ಅವರು 2006ರಲ್ಲಿ ಪಾಟ್ನಾದ ಮಗದ್ ವಿಶ್ವವಿದ್ಯಾಲಯದಿಂದ ಬಿಎ ಪದವಿ ಪಡೆದಿದ್ದಾರೆ. ಪದವೀಧರ ಶಾಸಕರಿಂದ ಕ್ಷೇತ್ರದಲ್ಲಿ ಹೊಸ ಅಭಿವೃದ್ಧಿಯ ನಿರೀಕ್ಷೆಯಲ್ಲಿದ್ದಾರೆ ಜನರು.
ವಿಜಯನಗರ ಕ್ಷೇತ್ರದ ಶಾಸಕ:
ನೂತನ ಜಿಲ್ಲಾ ಕೇಂದ್ರ ವಿಜಯನಗರ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಎಚ್.ಆರ್.ಗವಿಯಪ್ಪ ಅವರು ಪ್ರಥಮ ಪಿಯುಸಿ ಮುಗಿಸಿದ್ದಾರೆ. ಮಿತಭಾಷಿಯಾಗಿರುವ ಇವರು ಅಪಾರ ಜ್ಞಾನ ಹೊಂದಿದ್ದು ಪಕ್ಷದಲ್ಲಿ ಉತ್ತಮ ಒಡನಾಟ ಹೊಂದಿದ್ದಾರೆ. ಸಧ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿರುವುದರಿಂದ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರುವ ಜತೆಗೆ ನೂತನ ಜಿಲ್ಲೆಗೆ ಅಗತ್ಯ ಕೆಲಸಗಳನ್ನು ಮಾಡುವ ಸಾಮಥ್ರ್ಯವನ್ನು ಹೊಂದಿದ್ದಾರೆ.
ಕೂಡ್ಲಿಗಿ ಶಾಸಕ:
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರು, ದೆಹಲಿಯ ಏಮ್ಸ್‍ನಲ್ಲಿ ನೇತ್ರಶಾಸ್ತ್ರದಲ್ಲಿ ಸ್ನಾತಕೋತ್ತರ (ಎಂ.ಡಿ.) ಪದವಿ ಪಡೆದಿದ್ದಾರೆ. ಮಾಜಿ ಸಚಿವ ಎನ್.ಟಿ.ಬೊಮ್ಮಣ್ಣ ಅವರ ಪುತ್ರರಾಗಿರುವ ಇವರು ಮೊದಲ ಬಾರಿ ಗೆದ್ದಿದ್ದಾರೆ. ಫಸ್ಟ್ ಟೈಂ ಶಾಸಕರಾಗಿರುವ ವೈದ್ಯರಿಂದ ಕೂಡ್ಲಿಗಿಯ ಅಭಿವೃದ್ಧಿಯಲ್ಲಿ ಶಸ್ತ್ರಚಿಕಿತ್ಸೆಯಾಗಬೇಕಿದೆ. ಜನರೊಂದಿಗೆ ಬೆರೆತು ಜೀವಿಸುವ ಇವರು ಸರಳ ಜೀವಿ ಎಂದೇ ಹೆಸರಾಗಿದ್ದಾರೆ.
ಹರಪನಹಳ್ಳಿ ಶಾಸಕರು:
ಪಿಯು ಪಾಸಾಗಿರುವ ಪಕ್ಷೇತರ ಶಾಸಕಿ: ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಅಚ್ಚರಿಯ ರೀತಿಯಲ್ಲಿ ಪಕ್ಷೇತರ ಶಾಸಕಿಯಾಗಿ ಆಯ್ಕೆಯಾಗಿರುವ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ಹಡಗಲಿಯ ಜಿ.ಬಿ.ಆರ್. ಕಾಲೇಜಿನಲ್ಲಿ 1983-84 ಪಿಯುಸಿ ವಿದ್ಯಾಭ್ಯಾಸ ಮಾಡಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ ಅವರ ಪುತ್ರಿಯಾಗಿರುವ ಇವರು  ಕಾಂಗ್ರೆಸ್ ಟಿಕೆಟ್ ನಿರೀಕ್ಷಿಸಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಶ್ರಮಿಸಿದ್ದರು. ಆದರೆ, ಕೊನೆ ಘಳಿಗೆಯಲ್ಲಿ ಟಿಕಟ್ ಕೈ ತಪ್ಪಿದ ಹಿನ್ನೆಲೆ ಜನರ ಮೇಲಿನ ಸ್ವಾಭಿಮಾನದಿಂದ ಸ್ಪರ್ಧಿಸಿ ಜಯಗಳಿಸಿದ್ದಾರೆ.