ವಿದ್ಯಾರ್ಥಿ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ ಪ್ರತಿಭಟನೆ

ರಾಯಚೂರು,ಸೆ.೮- ವಿದ್ಯಾರ್ಥಿ ವೇತನ,ಹಾಸ್ಟೆಲ್ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ( ಎಸ್‌ಎಫ್‌ಐ ) ರಾಯಚೂರು ಜಿಲ್ಲಾ ಸಮಿತಿ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ರಾಜ್ಯದ ಶಿಕ್ಷಣ ಕ್ಷೇತ್ರ ಮತ್ತು ವಿದ್ಯಾರ್ಥಿಗಳು ಇಂದು ಅನೇಕ ಜ್ವಲಂತ ಶೈಕ್ಷಣಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಇದರಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಬಲವಾದ ಪೆಟ್ಟು ಬಿದ್ದು ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆಂದು ಆರೋಪಿಸಿದರು.
ವಿದ್ಯಾರ್ಥಿಗಳ ಸಂಖ್ಯೆ ಮತ್ತು ಮಾದರಿ ಶಾಲೆ ನೆಪದಲ್ಲಿ ೧೩,೮೦೦ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವುದನ್ನು ಕೂಡಲೇ ಕೈಬಿಡಬೇಕು.ಹಾಸ್ಟೆಲ್ ಪ್ರವೇಶಕ್ಕೆ ಕೌನ್ಸಿಲಿಂಗ್ ಪ್ರಕ ಕೈಬಿಟ್ಟು ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೀಟ್ ನೀಡಬೇಕು,ಹಾಸ್ಟೆಲ್ ವಿದ್ಯಾರ್ಥಿಗಳ ತಿಂಗಳ ಆಹಾರ ಭತ್ಯೆ ಕೇರಳ ಮಾದರಿಯಲ್ಲಿ ಕನಿಷ್ಠ ೩೫೦೦/ರೂ ಗೆ ಹೆಚ್ಚಳ ಮಾಡಬೇಕು, ವಿದ್ಯಾರ್ಥಿಗಳಿಗೆ ನೀಡದೆ ಬಾಕಿ ಇರುವ ಬೈಸಿಕಲ್, ಸಮವಸ್ತ್ರ, ವಿದ್ಯಾರ್ಥಿವೇತನ, ಫೆಲೋಶೀಫ್ ಮುಂತಾದ ಶೈಕ್ಷಣಿಕ ಪ್ರೋತ್ಸಾಹ ಯೋಜನೆಗಳನ್ನು ಸಮರ್ಪಕವಾಗಿ ನೀಡಬೇಕು ಹಾಗೂ ಈ ಯೋಜನೆಗಳಿಗೆ ಅನುದಾನ ಹೆಚ್ಚಿಸಬೇಕು. ಪಠ್ಯ ಪುಸ್ತಕಗಳ ಕೋಮುವಾದೀಕರಣ ಹಾಗೂ ಸಾವರ್ಕರ್ ಬುಲ್ ಬುಲ್ ಹಕ್ಕ ಮೇಲೆ ಪ್ರಯಾಣದ ಅವೈಜ್ಞಾನಿಕ ಪಾಠಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ತುಮಕೂರು ವಿಶ್ವವಿದ್ಯಾಲಯದಲ್ಲಿ ಬ್ರಿಟಿಷರ ಏಜೆಂಟ್ ಸಾವರ್ಕರ್ ಪೀಠ ಸ್ಥಾಪನೆ ಮಾಡಿರುವುದನ್ನು ಈ ಕೂಡಲೇ ರದ್ದುಪಡಿಸಬೇಕು,ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಶಿಕ್ಷಕರ, ಉಪನ್ಯಾಸಕ, ಪ್ರಾಧ್ಯಾಪಕರ ಹುದ್ದೆಗಳ ಭರ್ತಿ ಮಾಡಿ ಗುಣಮಟ್ಟದ ಬೋಧನೆ ಕಲ್ಪಿಸಲು ಬೇಕು. ಅಪಾಯಕಾರಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಎನ್.ಇಪಿ ಜಾರಿಯ ಹೆಸರಿನಲ್ಲಿ ಅಂಗನವಾಡಿ,ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸುವುದನ್ನು ಕೈಬಿಡಲು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಶಿವಕುಮಾರ ಮ್ಯಾಗಳಮನಿ, ರಾಜ್ಯ ಜಂಟಿ ಕಾರ್ಯದರ್ಶಿ ಭೀಮನಗೌಡ ಸುಂಕಶ್ವೇರಾಳ, ರಾಜ್ಯ ಸಮಿತಿ ಸದಸ್ಯರಾದ ಚಿದಾನಂದ, ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜ ದೀನಸಮುದ್ರ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.