ವಿದ್ಯಾರ್ಥಿ ಭವನ್ ಸರ್ಕಲ್ ನಲ್ಲಿ ಸಾರ್ವಜನಿಕರಿಗೆ ಕಿರಿಕಿರಿ

ದಾವಣಗೆರೆ.ಏ.೧೯; ಸ್ಮಾರ್ಟ್ ಸಿಟಿ ಯೋಜನೆ ತರಲು ಮಾಜಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ರವರು, ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ ನವರ ಸಹಕಾರ ಹಾಗೂ ಹಿಂದಿನ ಅವಧಿಯ ಮಹಾನಗರ ಪಾಲಿಕೆಯ ಪರಿಶ್ರಮದಿಂದ ಸಹಾಯವಾಯಿತು.ದಾವಣಗೆರೆ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಕೆಲಸ ಕಾರ್ಯಗಳು ವೇಗವಾಗಿ ಪ್ರಾರಂಭವಾಗುತ್ತವೆ ಆದರೆ ಕೆಲಸ ಮುಗಿದ ನಂತರ ತಾವೇ ತೆಗೆಸಿದ ಗುಂಡಿಗಳನ್ನು ಮುಚ್ಚಿಸಲು ಮಾತ್ರ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಸಂಚಾಲಕ ಕೆ.ಎಲ್ ಹರೀಶ್ ಬಸಾಪುರ ಬೇಸರ ವ್ಯಕ್ತಪಡಿಸಿದ್ದಾರೆ. ಇಂದಿನ ಪರಿಸ್ಥಿತಿಗೆ ತಾಜಾ ಉದಾಹರಣೆ ನಗರದ ವಿದ್ಯಾರ್ಥಿ ಭವನ್ ಸರ್ಕಲ್. ಸಿಗ್ನಲ್ ಲೈಟ್ ಅಳವಡಿಸಲು ನಾಲ್ಕು ದಿಕ್ಕುಗಳಲ್ಲೂ ಫೇವರ್ಸ್ ತೆಗೆದು, ಗುಂಡಿ ಅಗೆದು  ನಂತರ ಅದನ್ನು ಮುಚ್ಚದೆ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.ವಿದ್ಯಾರ್ಥಿ ಭವನ ಸರ್ಕಲ್ ತೀವ್ರ ಜನದಟ್ಟಣೆ ಪ್ರದೇಶದಲ್ಲಿದ್ದು , ಪ್ರತಿದಿನ ಸಾವಿರಾರು ವಾಹನಗಳು ಓಡಾಡುತ್ತಿರುತ್ತವೆ ಆದರೂ ಸಹ ಇದರ ಬಗ್ಗೆ ಗಮನ ಹರಿಸದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಬೇಕಾದ ಕಾರ್ಯವನ್ನು ಅಧಿಕಾರಸ್ಥರು ಮಾಡಬೇಕಾಗಿದೆ.ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಬಂದ ಅನುದಾನವನ್ನು ಬಿಜೆಪಿ ನಾಯಕರು ತಮ್ಮ ಹಿಂಬಾಲಕರಿಗೆ ಕಾಮಗಾರಿ ಗುತ್ತಿಗೆ ಕೊಡಿಸುತ್ತಿದ್ದು, ಇದರಿಂದಲೇ ಕಾಮಗಾರಿಯ ಗುಣಮಟ್ಟ ಕಳಪೆಯಾಗುತ್ತಿದೆ.ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳದೇ ಇದ್ದರೆ ಯೋಜನೆಯ ಹಣ ಖಾಲಿಯಾಗುವುದು ಹಾಗೂ ಕಾಮಗಾರಿಯು ಕಳಪೆಯಾಗಿ, ಹಣ ಗುತ್ತಿಗೆದಾರರ ಜೇಬು ಸೇರುತ್ತದೆ ಎಂದಿದ್ದಾರೆ.