ವಿದ್ಯಾರ್ಥಿ ಬದುಕು ಭಾವಿಜೀವನದ ದಿಕ್ಸೂಚಿ

ವಿಜಯಪುರ:ಅ.13: ದಯೆ, ಧೈರ್ಯ, ನಮ್ರತೆ, ಪ್ರಾಮಾಣಿಕತೆ, ಸತ್ಯತೆ, ಸಮಗ್ರತೆ, ಗೌರವ, ಕಠಿಣ ಪರಿಶ್ರಮ, ಸಹನೆ, ಸಹಾನುಭೂತಿಯಂತಹ ನೈತಿಕ ಮೌಲ್ಯಗಳನ್ನು ಇಂದಿನ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ನಗರದ ಜ್ಞಾನಯೋಗಾಶ್ರಮದಲ್ಲಿ ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಜರುಗಿದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ವಿದ್ಯಾರ್ಥಿಯ ಜೀವನವು ಸವಾಲುಗಳು,ಬೆಳವಣಿಗೆ, ಬದಲಾವಣೆಗಳು ಮತ್ತು ವಿಕಾಸದಿಂದ ತುಂಬಿರುತ್ತದೆ. ಅವರು ಗ್ರಹಿಕಾ ಸಾಮಥ್ರ್ಯ,ಆಲೋಚನಾ ಶಕ್ತಿ,
ಆಸಕ್ತಿಯಂತಹ ಗುಣಗಳನ್ನು ರೂಢಿಸಿಕೊಂಡು ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಾಚಾರ್ಯ ಡಾ.ಎಸ್ ಟಿ ಬೋಳರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಧುನಿಕ ಕಾಲದ ವಿದ್ಯಾರ್ಥಿಯು ಜೀವನದಲ್ಲಿ ಶಾಂತಿ, ನೆಮ್ಮದಿ, ಸಾಮರಸ್ಯದ ಮೂಲಕ ಬದುಕು ಸುಂದರವಾಗಿಸಿಕೊಳ್ಳಬೇಕು. ಆಧುನಿಕ ಜೀವನ ಪದ್ಧತಿಯ ಕಡೆಗೆ ಆಕರ್ಷಿತರಾಗದೆ ಶಿಕ್ಷಣದ ನೈಜ ಆಶಯವನ್ನು ಈಡೇರಿಸುವತ್ತ ಮನಸ್ಸು ಮಾಡಬೇಕಾಗಿದೆ. ಕಷ್ಟಪಟ್ಟು ವ್ಯಾಸಂಗದತ್ತ ಮುಖ ಮಾಡಬೇಕು ಎಂದು ಹೇಳಿದರು.ಕಾಲೇಜಿನ ಉಪನ್ಯಾಸಕರು ಹಾಗೂ ಬಿ ಎಡ್ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.