
ಔರಾದ : ಜು.10:ವಿದ್ಯಾರ್ಥಿ ಶಕ್ತಿ ರಾಷ್ಟ್ರ ಶಕ್ತಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸಂಸ್ಥಾಪನಾ ದಿನವಾದ ರಾಷ್ಟ್ರೀಯ ವಿದ್ಯಾರ್ಥಿ ದಿನಾಚರಣೆಯನ್ನು ಔರಾದ ಪಟ್ಟಣದ ಪತ್ರಿಸ್ವಾಮಿ ಪದವಿ ಪೂರ್ವ ಕಾಲೇಜಿನಲ್ಲಿ, ವಿದ್ಯಾಮಾತೆ ಶಾರಧೆ ಹಾಗೂ ಸಿಡಿಲ ಸನ್ಯಾಸಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರೇವಣಸಿದ್ದ ಜಾಡರ್ ಮಾತನಾಡಿ ಕಳೆದ ಏಳುವರೆ ದಶಕಗಳಿಂದ ಸಿಡಿಲ ಸನ್ಯಾಸಿ ವಿವೇಕಾನಂದ ವಿಚಾರಗಳನ್ನು ಆದರ್ಶವಾಗಿಟ್ಟುಕೊಂಡು ಕಾಲೇಜುಗಳು, ಹಾಸ್ಟೆಲ್, ವಿವಿ ಕ್ಯಾಂಪಸ್ ಗಳನ್ನು ಕೇಂದ್ರವಾಗಿಸಿಕೊಂಡು ವಿವಿಧ ರಚನಾತ್ಮಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಸವಾರ್ಂಗೀಣ ವಿಕಾಸಕ್ಕೆ ಪರಿಷತ್ ಕಾರ್ಯೋನ್ಮುಖವಾಗಿದ್ದು ಪ್ರತಿ ವರ್ಷ ಪರಿಷತ್ತಿನ ಸಂಸ್ಥಾಪನಾ ದಿನವನ್ನು ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನಾಗಿ ಆಚರಿಸುವ ಮೂಲಕ ರಕ್ತದಾನ ಶಿಬಿರ, ಗಿಡ ನೆಡುವ, ಸ್ವಚ್ಛತೆ, ಸೆರಿದಂತೆ ಶಾಲಾ ಕಾಲೇಜು ಹಾಸ್ಟೆಲ್ ಗಳಲ್ಲಿ ವಿವಿಧ ರಚನಾತ್ಮಕ ಚಟುವಟಿಕೆಗಳ ಕೈಗೊಳ್ಳಲಾಗುತ್ತಿದೆ ಎಂದು ನುಡಿದರು.
ಪ.ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಸಂಘದ ಜಿಲ್ಲಾ ಕಾರ್ಯದರ್ಶಿ ಹಾಗೂ ನಾಲಂದ ಕಾಲೇಜಿನ ಪ್ರಾಂಶುಪಾಲ ಮನ್ಮಥ ಡೋಳೆ ಅವರು ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸುಗಳಿಸಬೇಕಾದರೆ ಸಮಯ ಪಾಲನೆ ಹಾಗೂ ಶಿಸ್ತು ಅಳವಡಿಸಿಕೊಳ್ಳಬೇಕು, ಅಂಥಹ ಆದರ್ಶ ಮೌಲ್ಯಗಳ ತುಂಬುವ ಕಾರ್ಯ ವಿದ್ಯಾರ್ಥಿ ಪರಿಷತ್ ಮಾಡುತ್ತಿದ್ದು ಪರಿಷತ್ತಿನ ಕಾರ್ಯ ಶ್ಲಾಘನೀಯವಾಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಎಬಿವಿಪಿ ನಗರ ಕಾರ್ಯದರ್ಶಿ ನವನಾಥ ಕೋಳಿ, ಉಪನ್ಯಾಸಕ ರಾಜಕುಮಾರ ಗುಡುಮೆ, ಅಜ್ಮಿರಾ, ಎಬಿವಿಪಿಯ ಹಾವಪ್ಪ ದ್ಯಾಡೆ, ಅಶೋಕ್ ಶಂಬಳ್ಳಿ, ಅನಿಲ್ ಮೇತ್ರೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುಪ್ರೀಯಾ ನಿರುಪಿಸಿದರು,ಲಕ್ಷ್ಮಿ ಸ್ವಾಗತಿಸಿದರು, ಬಳಿರಾಮ ವಂದಿಸಿದರು.