ವಿದ್ಯಾರ್ಥಿ ನಿಲಯಗಳ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಿ ಸಿಇಓ ಸೂಚನೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಆ.23: ವಸತಿ ನಿಲಯಗಳಲ್ಲಿ ಆಹಾರ ಗುಣಮಟ್ಟ ಕಾಪಾಡುವ ಜೊತೆಗೆ, ಕುಡಿಯುವ ನೀರಿನ ವ್ಯವಸ್ಥೆ ನಿರ್ವಹಣೆಗೆ ಹಾಸ್ಟೆಲ್ ಮೇಲ್ವಿಚಾರಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ. ಕಟ್ಟಪ್ಪಣೆ  ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ವಿದ್ಯಾರ್ಥಿ ನಿಲಯಗಳ ಮೂಲಭೂತ ಸೌಕರ್ಯಗಳ ಕುರಿತಾದ ವಿಡಿಯೊ ಸಂವಾದದ ಮೂಲಕ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾ ಪಂಚಾಯಿತಿ ಕಛೇರಿಯಲ್ಲಿ ವಿದ್ಯಾರ್ಥಿನಿಲಯಗಳಲ್ಲಿನ ಪ್ರಸ್ತುತ ಮೂಲಭೂತ ಸೌಕರ್ಯ, ಹಾಸ್ಟೆಲ್‍ಗಳಲ್ಲಿನ ಸ್ವಚ್ಛತೆ ಮತ್ತಿತರ ವಿಷಯಗಳ ಕುರಿತಾಗಿ ಸಭೆ ನಡೆಸಿದರು.
ಪ್ರಸ್ತುತ ಹಾಸ್ಟೆಲ್‍ಗಳ ಸ್ಥಿತಿಗತಿ ಕಟ್ಟಡದ ಕೊರತೆ ಮತ್ತು ಅಲ್ಲಿನ ಮೂಲಭೂತ ಸೌಕರ್ಯಗಳ ಸಮಗ್ರ ಮಾಹಿತಿ ಪಡೆದರು. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ತಾಲ್ಲೂಕು ಹಂತದ ಪ್ರಗತಿ ಪರಿಶೀಲನೆ ಸಭೆಗಳನ್ನು ನಡೆಸಿದ್ದು, ಮುಂದಿನ ದಿನಗಳಲ್ಲಿ ಅನಿರೀಕ್ಷಿತ ಭೇಟಿ ನೀಡುವುದಾಗಿ ತಿಳಿಸಿದ್ದು, ಎಲ್ಲಾ ತಾಲ್ಲೂಕಿನ ಅಧಿಕಾರಿಗಳು ಏನಾದರೂ ಸಮಸ್ಯೆಗಳು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಸಮಸ್ಯೆಗಳ ನಿವಾರಣೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.