ವಿದ್ಯಾರ್ಥಿ ಜೀವನ ಬದುಕಿಗೆ ಭದ್ರಬುನಾದಿ

ದೇವದುರ್ಗ,ಮಾ.೦೪- ವಿದ್ಯಾರ್ಥಿ ಜೀವನ ಪ್ರತಿಯೊಬ್ಬರಿಗೂ ಮಹತ್ವದಾಗಿದ್ದು, ಜೀವನದ ಭದ್ರ ಬುನಾದಿಯಾಗಿದೆ. ಇಲ್ಲಿ ಉತ್ತಮ ಅಡಿಪಾಯ ಹಾಕಿದರೆ ಜೀವನ ಎನ್ನುವ ಮನೆ ಗಟ್ಟಿಮುಟ್ಟಾಗಿರುತ್ತದೆ. ವಿದ್ಯಾರ್ಥಿಗಳು ಇದನ್ನು ಅರಿತು ಉತ್ತಮ ಅಭ್ಯಾಸ ಮಾಡಬೇಕು ಎಂದು ಇಸಿಒ ಶರಣಪ್ಪ ಹೇಳಿದರು.
ತಾಲೂಕಿನ ಮಲದಕಲ್ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೮ನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು. ವಿದ್ಯಾರ್ಥಿ ಜೀವನ ಅಮೂಲ್ಯವಾಗಿದೆ. ಹಿಂದುಳಿದ ಮಲದಕಲ್ ಗ್ರಾಮದಲ್ಲಿ ಓದಿದ ನ್ಯಾ.ಶಿವರಾಜ ಪಾಟೀಲ್ ದೇಶದ ಅತ್ಯುನ್ನತ ಹುದ್ದೆ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ಅಂಥವರು ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು ಎಂದರು.
ವಕೀಲ ರಾಜ್‌ಅಹಮದ್ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂದು ತಮ್ಮ ಪ್ರತಿಭೆ ಮೂಲಕ ದೊಡ್ಡ ಸಾಧನೆ ಮಾಡಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದಿದವರು ಎಷ್ಟೋ ವಿದ್ಯಾರ್ಥಿಗಳು ಉನ್ನತ ಹುದ್ದೆಗೇರಿದ್ದಾರೆ. ವಿದ್ಯಾರ್ಥಿಗಳು ಕೀಳೀರಿಮೆ ಬಿಟ್ಟು ಕಷ್ಟಪಟ್ಟು ಓದಿ, ಪಾಲಕರು, ಶಾಲಾ ಶಿಕ್ಷಕರು ಹಾಗೂ ಊರಿನ ಗೌರವ ಕಾಪಾಡಬೇಕು. ಈ ಭಾಗದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿದ ನಂತರ ದೊಡ್ಡ ಊರಿಗೆ ಹೋಗಬೇಕಿದೆ. ಸರ್ಕಾರ ಪ್ರೌಢಶಾಲೆ ಮಂಜೂರು ಮಾಡಬೇಕು ಎಂದು ಹೇಳಿದರು.
ಎಸ್‌ಡಿಎಂ ಅಧ್ಯಕ್ಷೆ ಸಂಗೀತಾ ಬಾಲಿಂಗಪ್ಪ, ಶರಣಪ್ಪ, ರೇಷ್ಮಾಭಾನು ರಾಜ್‌ಅಹಮದ್, ಆಂಜನೇಯ ನಾಯಕ, ಸಿಆರ್‌ಸಿ ಶಂಭುಲಿಂಗ, ಸ್ವಾತಿ ನಾಯಕ ಇತರರಿದ್ದರು.