ವಿದ್ಯಾರ್ಥಿ ಜೀವನದಲ್ಲಿ ಸ್ಪೂರ್ತಿ ಎಂಬುದು ಅಮೆಜಾನ್ ನದಿಯಂತೆ: ಭರಮಪ್ಪ ಮೈಸೂರು

ಸಂಜೆವಾಣಿ ವಾರ್ತೆ

ದಾವಣಗೆರೆ.ಏ.೬; ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಬ್ರಹ್ಮೀ ಅಕಾಡೆಮಿ ದಾವಣಗೆರೆ, ಹಿರಿಯ ನಾಗರಿಕರ ಸಹಾಯವಾಣಿ ದಾವಣಗೆರೆ ಇವರ ಸಹಯೋಗದಲ್ಲಿ ಶಾಲಾ ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮ ಬ್ರಹ್ಮೀ ಅಕಾಡೆಮಿ ಕಾಲೇಜು ಆವರಣದಲ್ಲಿ ನಡೆಯಿತು.ಬ್ರಹ್ಮೀ ಅಕಾಡೆಮಿ ಕಾಲೇಜಿನ ಉಪನ್ಯಾಸಕ ಮಧುಸೂದನ್ ಅಧ್ಯಕ್ಷತೆಯಲ್ಲಿ ವೇದಿಕೆಯಲ್ಲಿರುವ ಗಣ್ಯರಿಂದ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.ತಾಲ್ಲೂಕು ಕಸಾಪ ಅಧ್ಯಕ್ಷೆ ಶ್ರೀಮತಿ ಸುಮತಿ ಜಯಪ್ಪ ಇವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಸಾಪ ನಡೆದುಬಂದ ದಾರಿ ಹಾಗೂ ದತ್ತಿ ದಾನಿಗಳನ್ನು ಸ್ಮರಿಸುತ್ತಾ, ವಿದ್ಯಾರ್ಥಿಗಳಿಗೆ ಸಮಯವೆಂಬುದು ನಿಜವಾದ ಸಂಪತ್ತು ಇದ್ದ ಹಾಗೆ. ಆ ಸಮಯವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಯಶಸ್ಸಿನ ಗುಟ್ಟಿರುವುದು ಏಕಾಗ್ರತೆಯಲ್ಲಿ, ಏಕಾಗ್ರಗೊಂಡ ಮನಸ್ಸಿಗೆ ಅಪಾರ ಶಕ್ತಿ ಇರುತ್ತದೆ. ಆತ್ಮವಿಶ್ವಾಸವಿಲ್ಲದವರು ಪರಾವಲಂಬಿಗಳಾಗುತ್ತಾರೆ ಹಾಗಾಗಿ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ. ನನ್ನಿಂದ ಸಾಧ್ಯ, ನಾನು ಓದಬಲ್ಲೆ, ನಾನು ಹೆಚ್ಚು ಅಂಕ ತೆಗೆಯಬಲ್ಲೆ… ಎಂಬ ದೃಢವಾದ ಆತ್ಮವಿಶ್ವಾಸ ನಿಮ್ಮಲ್ಲಿರಲಿ. ಒಬ್ಬರಿಗೆ ಯಾವುದು ಸಾಧ್ಯವೋ ಅದು ಎಲ್ಲರಿಗೂ ಸಾಧ್ಯ. ಭಯವನ್ನು ಬಿಸಾಕಿ, ಅಂಜಿಕೆಯನ್ನು ಹಿಂದಿಕ್ಕಿ, ಕೀಳರಿಮೆಯನ್ನು ಕಿತ್ತುಹಾಕಿ ತಾವೆಲ್ಲರೂ ಧೈರ್ಯದಿಂದ ಮುನ್ನುಗ್ಗಬೇಕೆಂದರು. ಸಾಧಿಸುವ ಗುರಿ ಇಟ್ಟುಕೊಂಡು ಅದನ್ನು ಸಾಕಾರಗೊಳಿಸಲು ಸತತ ಪ್ರಯತ್ನಪಡಿ ಎಂದು ಕಿವಿಮಾತು ಹೇಳಿದರು.ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಉಪನ್ಯಾಸಕರಾದ ಮಧುಸೂದನ್ ಅವರು, ವಿದ್ಯಾರ್ಥಿಗಳು ಶಿಸ್ತಿನ ಜೀವನವನ್ನು ನಡೆಸಿ ಬದುಕನ್ನು ಸುಂದರಗೊಳಿಸಿಕೊಳ್ಳಬೇಕೆಂದು ತಿಳಿಸಿದರು.ನಿವೃತ್ತ ಶಿಕ್ಷಣಾಧಿಕಾರಿಗಳಾದ ಭರಮಪ್ಪ ಮೈಸೂರು ಇವರು ಶ್ರದ್ಧೆ ಯಶಸ್ಸಿನ ಕೀಲಿಕೈ ಕುರಿತು ದತ್ತಿ ಉಪನ್ಯಾಸ ನೀಡುತ್ತಾ, ಸ್ಪೂರ್ತಿ ಎಂಬುದು ಅಮೆಜಾನ್ ನದಿ ಇದ್ದಂತೆ ಎಲ್ಲಾ ವಿದ್ಯಾರ್ಥಿಗಳಲ್ಲಿಯೂ ಈ ಸ್ಪೂರ್ತಿಯು ಅಗಾಧವಾಗಿರುತ್ತದೆ. ವಿದ್ಯಾರ್ಥಿಗಳು ಯಾರು ದಡ್ಡರಲ್ಲ ಎಲ್ಲಾ ವಿದ್ಯಾರ್ಥಿಗಳಲ್ಲಿಯೂ ಅಗಾಧವಾದ ಬುದ್ಧಿಶಕ್ತಿ ಇರುತ್ತದೆ. ಇರುವ ಶಕ್ತಿಯನ್ನು ಸ್ಪೂರ್ತಿ ಎಂದು ಈ ಸ್ಪೂರ್ತಿಯೊಂದಿಗೆ ಪ್ರೇರಣೆ ನಂಬಿಕೆ ಸಾಧನೆಗಳ ಮುಖಾಂತರ ತಮ್ಮ ಗುರಿಯನ್ನು ಸಾಧಿಸಬಹುದು ಎಂದು ತಿಳಿಸಿದರು. ಸಾಲಮರದ ತಿಮ್ಮಕ್ಕ, ಸರ್ ಸಿ.ವಿ. ರಾಮನ್, ಅಬ್ದುಲ್ ಕಲಾಂ, ಮುಂತಾದ ಹಲವಾರು ಸಾಧಕರ ಉದಾರಣೆಗಳನ್ನು ಕೊಡುತ್ತಾ ಮಕ್ಕಳು ಜಾಗೃತರಾಗಿ ತಮ್ಮ ಬದುಕನ್ನು ಹೇಗೆ ಕಟ್ಟಿಕೊಳ್ಳಬಹುದು ಎಂಬುದನ್ನು ತಿಳಿಸಿದರು. ಎಲ್ಲಾ ಸಾಧಕರು ತಮ್ಮ ಮಾತೃಭಾಷೆಯಲ್ಲಿ ಶಿಕ್ಷಣ ಪಡೆದು ಎಲ್ಲಾ ವಿಷಯಗಳನ್ನು ಅರ್ಥೈಸಿಕೊಂಡು ಮೇಲೆ ಬಂದರು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಶ್ರೀಮತಿ ರೇಖಾ ಓಂಕಾರಪ್ಪ, ಶ್ರೀಮತಿ ಎ.ಎಲ್. ನಾಗವೇಣಿ. ಉಪಸ್ಥಿತರಿದ್ದರು. ಕಸಾಪ ನಿರ್ದೇಶಕ ಎ.ಎಂ. ಸಿದ್ದೇಶ್ ಕುರ್ಕಿ ಸರ್ವರನ್ನು ಸ್ವಾಗತಿಸಿದರು. ಕಸಾಪ ನಿರ್ದೇಶಕ ಆರ್. ಶಿವಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಸಾಪ ನಿರ್ದೇಶಕಿ ಶ್ರೀಮತಿ ಕೆ.ಜೆ. ಸೌಭಾಗ್ಯ ಸರ್ವರನ್ನು ವಂದಿಸಿದರು.