ವಿದ್ಯಾರ್ಥಿ ಜನಸಮುದಾಯದಲ್ಲಿ ವೈಜ್ಞಾನಿಕ ಪ್ರಜ್ಞೆ ಬೆಳೆಸಿ

ಕೋಲಾರ,ನ.೧೦: ಶಿಕ್ಷಕರು ವಿದ್ಯಾರ್ಥಿಗಳು ಮತ್ತು ಜನ ಸಮುದಾಯದಲ್ಲಿ ಮೌಡ್ಯಾಚರಣೆ ವಿರುದ್ಧ ಜನ ಜಾಗೃತಿ ಮೂಡಿಸುವ ಮೂಲಕ ಅವರಲ್ಲಿ ವೈಜ್ಞಾನಿಕ ಪ್ರಜ್ಞೆ ಬೆಳೆಸುವಂತೆ ಸಂಕಲ್ಪ ತೊಡಬೇಕೆಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಜಿ.ನಾಗೇಶ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿಂದು ಜಿಲ್ಲಾ ಜ್ಞಾನ ವಿಜ್ಞಾನ ಸಮಿತಿ, ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಪವಾಢ ಶಿಕ್ಷಕ ಡಾ.ಕೆ ಶ್ರೀನಿವಾಸ್‌ರವರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿಜ್ಞಾನ ಮತ್ತು ಗಣಿತ ವಿಷಯಗಳು ಕಠಿಣ ಎಂಬ ಭಾವನೆ ಹಲವು ವಿದ್ಯಾರ್ಥಿಗಳ ಮನಸ್ಸಿನಲ್ಲಿದೆ. ಈ ಭಾವನೆಯನ್ನು ಹೋಗಲಾಡಿಸಲು ಶಕ್ಷಕರು ಪ್ರಾಮಾಣಿಕವಾಗಿ ಸ್ಪಂಧಿಸುತ್ತಿದ್ದು, ವಿಜ್ಞಾನ, ಸಂಶೋಧನೆ, ಪ್ರಯೋಗಗಳನ್ನು ಬಾಲ್ಯದಿಂದಲೇ ಮಾಡಿಸುವುದರಿಂದ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಸಾಧ್ಯ ಎಂದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಕಾರ್ಯದರ್ಶಿ ಈ.ಬಸವರಾಜು ಮಾತನಾಡಿ ಜಗತ್ತು ನಿರಂತರ ಬದಲಾವಣೆಯಿಂದ ಕೂಡಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಅದರಲ್ಲೂ ಮಾಹಿತಿ ತಂತ್ರಜ್ಞಾನದ ಬದಲಾವಣೆ ಹೆಚ್ಚು ವೇಗದಿಂದ ಕೂಡಿದೆ. ಬದಲಾದ ಕಾಲಕ್ಕೆ ಅಗತ್ಯವಾದ ಶಿಕ್ಷಣ ನೀಬೇಕಾಗಿರುವುದು ನಾಗರೀಕ ಸಮಾಜದ ಕರ್ತವ್ಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಬಿ.ರಾಮಕೃಷ್ಣಪ್ಪ ಮಾತನಾಡಿ ಯಾವುದೇ ವಿಷಯವನ್ನು ವಿಶ್ಲೇಷಿಸದೆ, ಪರೀಕ್ಷಸದೆ, ಪ್ರಶ್ನಿಸದೆ ನಂಬಬೇಡಿ. ಸಂಪ್ರಾದಯದ ಹೆಸರಿನಲ್ಲಿ ಬಹಳಷ್ಟು ಜೀವ ವೈವಿದ್ಯತೆ ಹಾಳು ಮಾಡಿರುವ ನಾವು ಕಾಗೆ ಗೂಬೆಯನ್ನು ಅಶುಭ ಎನ್ನುತ್ತೇವೆ. ಹಾವಿನ ರೋಷ ಹನ್ನೆರಡು ವರ್ಷ ಎನ್ನುವ ನಾವು ಹಾವಿನ ಆಯಸ್ಸು ೯ ವರ್ಷ ಎಂಬುದನ್ನು ತಿಳಿದಿಲ್ಲ ಎಂದು ವಿಶ್ಲೇಷಿಸಿದರು.
ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತ ಜ್ಞಾನ ಮೂರ್ತಿ ಮಾತನಾಡಿ ವಿದ್ಯೆ ವಿನಯತೆ ಜೊತೆ ಸಾಮಾನ್ಯ ಜ್ಞಾನ, ವೈಜ್ಞಾನಿಕ ನೆಲೆಗಟ್ಟು ಬೆಳೆಸುವುದು ಶಿಕ್ಷಕರ ಕರ್ತವ್ಯ ಆಗಬೇಕು. ಆಗ ಮಾತ್ರ ಸದೃಢ ಸಮಾಜ ನಿರ್ಮಿಸಲು ಸಾಧ್ಯ ಎಂದರು.
ಜಿಲ್ಲಾ ಶಿಕ್ಷಣಾಧಿಕಾರಿ ಸಿ.ಆರ್. ಅಶೋಕ್ ಮಾತನಾಡಿ ಜಿಲ್ಲೆಯಾದ್ಯಂತ ಜ್ಞಾನ ವಿಜ್ಞಾನ ಸಮಿತಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದರ ಪ್ರಯೋಜವನ್ನು ಸದುಪಯೋಗಪಡಿಸಿಕೊಂಡು ಯುವ ವಿಜ್ಞಾನಿಗಳನ್ನು ಶಾಲೆಗಳಲ್ಲಿ ತಯಾರು ಮಾಡುವಂತೆ ಸಲಹೆ ನೀಡಿದರು.
ಅಭಿನಂದನೆ ಸ್ವೀಕರಿಸಿದ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ.ಕೆ.ಶ್ರೀನಿವಾಸ್ ಮಾತನಾಡಿ ಸಾರ್ವಜನಿಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ, ವೈಚಾರಿಕ ಮಹೋಭಾವನೆ ಮೂಡಿಸುವುದೇ ಪವಾಡ ರಹಸ್ಯ ಬಯಲು ಕಾರ್ಯಕ್ರಮವಾಗಿ ಈ ಕ್ಷೇತ್ರದಲ್ಲಿ ಡಾಕ್ಟರೇಟ್ ಮಟ್ಟಕ್ಕೆ ಗುರ್ತಿಸಿರುವ ವಿದ್ಯಾರ್ಥಿ, ಇಲಾಖೆ ಮತ್ತು ಸಾರ್ವಜನಿಕರಿಗೆ ಕೃತಜ್ಞತೆ ಅರ್ಪಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಹುದುಗಿರುವ ಜ್ಞಾನ, ವಿಜ್ಞಾನ, ತಂತ್ರಜ್ಞಾನವನ್ನು ಪತ್ತೆಹಚ್ಚಿ ಅವರಲ್ಲಿ ಮತ್ತಷ್ಟು ಜ್ಞಾನವನ್ನು ತುಂಬಲು ಶ್ರಮಿಸುತ್ತಿರುವ ಎಲ್ಲಾ ಹಂತದ ಶಿಕ್ಷಕರ ಸೇವೆ ಶ್ಲಾಘನೀಯವಾದುದ್ದು ಎಂದರು.
ಸಮಗ್ರ ಶಿಕ್ಷಣ ಜಿಲ್ಲಾ ಉಪಸಮನ್ವಯಾಧಿಕಾರಿ ಗಂಗರಾಮಯ್ಯ, ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯರ ಸಂಘದ ಕಾರ್ಯದರ್ಶಿ ಬಿ.ಶ್ರೀನಿವಾಸ್, ಸಂಘದ ಸಘಟನಾ ಕಾರ್ಯದರ್ಶಿ ಭಾಗ್ಯಲಕ್ಷ್ಮಮ್ಮ, ಖಜಾಂಚಿ ಹೆಚ್.ಆರ್.ನಾರಾಯಣಸ್ವಾಮಿ, ಸಂಘಟನಾ ಕಾರ್ಯದರ್ಶಿ ಚಾಮುಂಡೇಶ್ವರಿದೇವಿ, ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಜಗನ್ನಾಥ್, ಸಂಚಾಲಕ ಡಾ.ಶರಣಪ್ಪ ಗಬ್ಬೂರ್, ಉಪಾಧ್ಯಕ್ಷರಾದ ಸುಗುಣ, ಕೆ.ಎ.ಕಲಾವತಿ, ಕೋಶಾಧ್ಯಕ್ಷ ಡಾ.ಎಸ್.ಸಿ.ವೆಂಕಟಕೃಷ್ಣಪ್ಪ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಅಧ್ಯಕ್ಷ ಕಾರ್ಯದರ್ಶಿಗಳು, ಮತ್ತಿತರರು ಉಪಸ್ಥಿತರಿದ್ದರು.